)
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಹುಳಿಮಾವು ನಿವಾಸಿ ಲಕ್ಷ್ಮೀನಾರಾಯಣ ಎಂಬುವವರು ಸೋಮವಾರ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಮೊಬೈಲ್ ಕರೆಗಳ ವಿವರ, ಪೆನ್ ಡ್ರೈವ್ ಹಾಗೂ ದಾಖಲೆಗಳ ಸಮೇತ ಅಬಕಾರಿ ಸಚಿವರ ವಿರುದ್ಧ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀನಾರಾಯಣ, ಜ.17ರಂದು 25 ಲಕ್ಷ ರು. ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಬಕಾರಿ ಇಲಾಖೆ ಉಪ ಆಯುಕ್ತ ಜಗದೀಶ್ ನಾಯ್ಕ್, ಅಧೀಕ್ಷಕ ತಮ್ಮಣ್ಣ ಮತ್ತು ಕಾನ್ಸ್‌ಟೇಬಲ್ ಲಕ್ಕಪ್ಪ ಗನಿಯನ್ನು ಬಂಧಿಸಿದ್ದರು. ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ. ಲೋಕಾಯುಕ್ತ ಟ್ರ್ಯಾಪ್‌ಗೂ ಮುನ್ನ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಅವರು ಅಬಕಾರಿ ಸಚಿವರಿಗೆ ಲಂಚ ಕೊಡುವ ಬಗ್ಗೆ ಪ್ರಸ್ತಾಪಿಸಿದ್ದರು. ಹೀಗಾಗಿ ಅಬಕಾರಿ ಸಚಿವರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದೇನೆ. ಆಡಿಯೋ ರೆಕಾರ್ಡ್, ಪೆನ್ ಡ್ರೈವ್ ಸೇರಿದಂತೆ ಕೆಲ ದಾಖಲೆಗಳನ್ನು ನೀಡಿದ್ದೇನೆ ಎಂದರು.ದಾಖಲೆ ಸಹಿತ ದೂರು:
ಅಬಕಾರಿ ಡಿಸಿ ಜಗದೀಶ್ ಅವರು ಖುದ್ದು ನನ್ನೊಂದಿಗೆ ಲಂಚದ ಬಗ್ಗೆ ಮಾತನಾಡಿದ್ದಾರೆ. ಮೈಕ್ರೋ ಬ್ರೇವರಿ ಪರವಾನಗಿ ಪಡೆಯಲು 1.50 ಕೋಟಿ ರು. ಲಂಚ ಕೊಡಬೇಕು. ಇದರಲ್ಲಿ ಬಹುಪಾಲು ಅಬಕಾರಿ ಸಚಿವರಿಗೆ ಹೋಗುತ್ತದೆ. ನಾನೇ ಮಾತನಾಡಿ 1.20 ಕೋಟಿ ರು.ಗೆ ಪರವಾನಗಿ ಕೊಡಿಸುವೆ. ಸಚಿವರೊಂದಿಗೆ ನೀವೇ ಮಾತನಾಡಿ, ಇಲ್ಲಾ ನಾನೇ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿದರು.ಅಬಕಾರಿ ಡಿಸಿ ಆಡಿಯೋ ಇದೆ:
ನಾನು ಅಬಕಾರಿ ಪರವಾನಗಿ ಪಡೆಯಲು ಕಾನೂನು ಪ್ರಕಾರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, 14.66 ಲಕ್ಷ. ಶುಲ್ಕವನ್ನೂ ಪಾವತಿಸಿದ್ದೇನೆ. ಈ ವೇಳೆ ಪರವಾನಗಿ ನನಗೆ ಸಿಗಬೇಕಿತ್ತು. ಆದರೂ ಲಂಚಕ್ಕೆ ಬೇಡಿಕೆ ಇರಿಸಿ ಪರವಾನಗಿ ಕೊಟ್ಟಿರಲಿಲ್ಲ. ಅಂದು ಲೋಕಾಯುಕ್ತ ಟ್ರ್ಯಾಪ್ ಆಗುವ ಐದು ನಿಮಿಷ ಮುಂಚೆ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಮಾತನಾಡಿರುವ ಆಡಿಯೋ ಇದೆ. ಅದನ್ನೂ ದೂರಿನ ಜತೆಗೆ ಕೊಟ್ಟಿದ್ದೇನೆ. ಎಸ್ಪಿ ಅವರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತೆಗೆದುಕೊಳ್ಳದಿದ್ದರೆ, ಮುಂದೆ ಕಾನೂನು ಹೋರಾಟ ನಡೆಸುತ್ತೇನೆ ಎಂದರು.ಅಂದು ಲೋಕಾಯುಕ್ತ ದಾಳಿ ವೇಳೆ ಸಿಎಂ ಕಚೇರಿಯಿಂದ ಫೋನ್ ಮಾಡಿದ್ದರಂತೆ. ಲೋಕಾಯುಕ್ತ ಟ್ರ್ಯಾಪ್ ವೇಳೆ ಯಾರಾದರೂ ಕರೆ ಮಾಡುತ್ತಾರಾ? ನಾನು ಇಲ್ಲಿಗೆ ಇದನ್ನು ಬಿಡುವುದಿಲ್ಲ ಎಂದು ದೂರುದಾರ ಲಕ್ಷ್ಮೀನಾರಾಯಣ ಹೇಳಿದರು.