ಮೊಳಕಾಲ್ಮೂರು: ತೆಂಗಿನ ನೀರಾ ಮಾರಾಟ ಮಾಡುತ್ತಿದ್ದ ರೈತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿರುವ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಅಬಕಾರಿ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಕಾರ್ಯಕರ್ತರು, ತಾಲೂಕಿನ ಬಿಜಿಕೆರೆ ಗ್ರಾಮದ ವಸುಂಧರಾ ಕೃಷಿ ಕ್ಷೇತ್ರದಲ್ಲಿ ತೆಂಗಿನ ನೀರಾ ಇಳಿಸಿ ಮಾರಾಟ ಮಾಡುತ್ತಿದ್ದ ರೈತ ಎಸ್.ಸಿ.ವೀರಭದ್ರಪ್ಪನವರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ಅಲ್ಲಿನ ನಾಮಫಲಕ ಕಿತ್ತು ಹಾಕಿದ್ದಲ್ಲದೆ, ನೀರಾ ಇಳಿಸಿದಂತೆ ಖಡಕ್ ಎಚ್ಚರಿಕೆ ನೀಡಿ ಅವರನ್ನು ಅವಮಾನ ಮಾಡಿರುವ ಕ್ರಮ ಖಂಡನೀಯ ಕೂಡಲೇ ಅಬಕಾರಿ ಅಧಿಕಾರಿಗಳು ಬೆಷರತ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.ಎಸ್.ಸಿ.ವೀರಭದ್ರಪ್ಪ ರಾಜ್ಯದಲ್ಲಿ ಪ್ರಗತಿ ಪರ ರೈತರಾಗಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿರುವ ಅವರು ಇತರರಿಗೆ ಮಾದರಿಯಾಗಿದ್ದಾರೆ. ದೊಡ್ಡ ದೊಡ್ಡ ರಾಜಕಾರಣಿಗಳು ಇವರ ಸಾಧನೆಯನ್ನು ಪ್ರಶಂಸಿದ್ದಾರೆ. ಈಗಿದ್ದರೂ ಇಲ್ಲಿನ ಅಧಿಕಾರಿಗಳು ತೋಟಕ್ಕೆ ಹೋಗಿದ್ದಲ್ಲದೆ ಅವರನ್ನು ಅವಮಾನಿಸುವುದು ಇಡೀ ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಕೂಡಲೇ ಇವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ರೈತ ಎಸ್.ಸಿ.ವೀರಭದ್ರಪ್ಪ, ರೈತ ಸಂಘದ ಕಾರ್ಯಾಧ್ಯಕ್ಷ ಬೇಡ ರೆಡ್ಡಿ ಹಳ್ಳಿ ಬಸವರೆಡ್ಡಿ. ಜಿಲ್ಲಾಧ್ಯಕ್ಷ ರವಿಕುಮಾರ್, ತಾಲೂಕ ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಬೊಮ್ಮದೇವರ ಹಳ್ಳಿ ವೆಂಕಟೇಶ ನಾಯಕ, ಹಿರೇಹಳ್ಳಿ ಗ್ರಾಮದ ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ರುದ್ರಮನಹಳ್ಳಿ ತಿಪ್ಪೇಸ್ವಾಮಿ, ರಾಯಪುರ ಬಸವರಾಜ, ಮಹಾಲಿಂಗಪ್ಪ ಶ್ರೀನಿವಾಸ ನಾಯಕ, ವೆಂಕಟೇಶ ನಾಯಕ, ಮಹೇಶ್, ಮೇಸ್ತ್ರಿ ಪಾಪಯ್ಯ, ನಿಂಗಣ್ಣ, ಮುಕ್ಕಣ್ಣ, ಮಲ್ಲಿಕಾರ್ಜುನ, ದಾಸಪ್ಪ ಇದ್ದರು.