ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2026- 27 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. ಟಿವಿ, ಚಲನ ಚಿತ್ರಗಳಲ್ಲಿ ಚಿತ್ರ ವಿಚಿತ್ರವಾದ ಬಟ್ಟೆ ಧರಿಸಿ, ಕೈಲಿ ಮಚ್ಚು, ದೊಣ್ಣೆ. ಸಿಗರೇಟು ಸೇದುತ್ತಾ ಬರುವ ನಾಯಕರನ್ನು ಎಂದೆಂದಿಗೂ ನಿಮ್ಮ ಆಯ್ಕೆ ಆಗದಿರಲಿ. ಚಲನಚಿತ್ರದಲ್ಲಿ ಪಾತ್ರವಹಿಸುವ ನಾಯಕ ನಿಮ್ಮ ಜೀವನದ ನಾಯಕನಾಗಲು ಸಾಧ್ಯವಿಲ್ಲ. ಅವರ ಬಳಿ ನೀವು ತೆರಳಲೂ ಸಾಧ್ಯವಿಲ್ಲ. ಅಂತಹವರನ್ನು ಏಕೆ ಆಯ್ಕೆ ಮಾಡಿಕೊಳ್ಳುವಿರಿ. ಅದರ ಬದಲು ಉತ್ತಮವಾದ ಸಾಹಿತ್ಯ, ಪುಸ್ತಕಗಳೇ ನಿಮ್ಮ ಸೆಲೆಬ್ರೆಟಿ ಆಗಿರಲಿ ಎಂದರು. ನಮಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಲಕ್ಷಾಂತರ ಮಂದಿಗೆ ದೃಷ್ಠಿದಾನ ಮಾಡಿದ ನೇತ್ರ ತಜ್ಞ ಮೋದಿಯವರಂತಹವರು ಮಾದರಿಯಾಗಬೇಕು. ಸಾರ್ಥಕತೆಯ ಬದುಕಿಗೆ ನಾಂದಿ ಹಾಡಬೇಕು. ಜನ ಮಾನಸದಲ್ಲಿ ಉಳಿದಿರುವಂತಹ ವ್ಯಕ್ತಿಗಳು ನಿಮ್ಮ ನಾಯಕನಾಗಬೇಕು. ನೈತಿಕ ಮೌಲ್ಯವನ್ನು ಸಾರುವವರು ನಮ್ಮವರಾಗಿರಬೇಕು ಎಂದರು. ವಿದ್ಯಾಭ್ಯಾಸವನ್ನು ತಪಸ್ಸಿನಂತೆ ಮಾಡಿ. ಯಶಸ್ವಿಯಾಗಿ. ಅದು ನಿಮ್ಮ ಜೀವನವನ್ನು ರೂಪಿಸುತ್ತದೆ. ನಿಮ್ಮನ್ನು ನೀವೇ ಮಾದರಿಯನ್ನಾಗಿಸಿಕೊಳ್ಳಿ. ನೀವೇ ಬೇರೆಯವರಿಗೆ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಿ. ಇತ್ತೀಚೆಗೆ ನೈತಿಕತೆ ಮಾಯವಾಗುತ್ತಿದೆ. ಹಿಂದಿನ ಶಾಲಾ ಪಠ್ಯಕ್ರಮಗಳಲ್ಲಿ ನೈತಿಕ ಶಿಕ್ಷಣದ ಪಾಠಗಳು ಇದ್ದವು. ಆದರೆ ಈಗ ಅವೆಲ್ಲಾ ಕಣ್ಮರೆಯಾಗಿದೆ. ಈಗ ಎಲ್ಲರೂ ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಎಲ್ಲರೂ ದುಡಿಮೆಯ ಓಟಕ್ಕೆ ಸಿಲುಕಿದ್ದಾರೆ. ಇದು ಮುಂದೊಂದು ದಿನ ಅಪಾಯಕಾರಿಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿಯ ಮೌಲ್ಯ ಕಾಪಾಡಬೇಕಿದೆ. ನಮ್ಮ ಸಂಸ್ಕೃತಿಯ ಅಳಿವು ಉಳಿವು ನಿಮ್ಮ ಕೈಲಿದೆ. ಸಾಮಾಜಿಕ ಜಾಲ ತಾಣಗಳನ್ನು ನಮಗೆ ನಾವೇ ನಿಷೇಧಿಸಿಕೊಳ್ಳಬೇಕಿದೆ. ಮೊಬೈಲ್ ನ ಬಳಕೆಯಿಂದ 400 ಕ್ಕೂ ಹೆಚ್ಚು ರೋಗಗಳು ಬರುತ್ತದೆ ಎಂಬುದು ಆಘಾತಕಾರಿ ಸಂಗತಿ. ಹಾಗಾಗಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲ ತಾಣಗಳಿಗೆ ಗುಡ್ ಬೈ ಹೇಳಿ ಪುಸ್ತಕಕ್ಕೆ ವೆಲ್ ಕಮ್ ಮಾಡಿ ಎಂದು ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ 80 ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ರೈತ ಸಾಹಿತಿ ಬಸವರಾಜು ರಪ್ಪದಣ್ಣ, ನಿವೃತ್ತ ಪ್ರಾಂಶುಪಾಲ ಎಂ.ಆರ್.ಪರಮೇಶ್ವರಸ್ವಾಮಿ, ನಿವೃತ ಎಸೈ ರಮೇಶ್, ಮುಖ್ಯ ಶಿಕ್ಷಕರಾದ ಎಚ್.ಎಂ.ರಂಗಸ್ವಾಮಿ, ಸದಾಶಿವಯ್ಯ, ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಈ.ರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಸ್ವಾಗತಿಸಿದರು. ಹಂಸರೇಖಾ ನಿರೂಪಿಸಿದರು. ಗಾನಶ್ರೀ ವಂದಿಸಿದರು.