ದಾಬಸ್‍ಪೇಟೆ: ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ತಡೆಗಟ್ಟುವ ಹಾಗೂ ಮಕ್ಕಳಿಗೆ ತಮ್ಮ ಹಕ್ಕುಗಳು ಮತ್ತು ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಕಾನೂನು ಅರೆಕಾಲಿಕ ಸ್ವಯಂಸೇವಕಿ ವೇದಾವತಿ ತಿಳಿಸಿದರು
ದಾಬಸ್‍ಪೇಟೆ: ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ತಡೆಗಟ್ಟುವ ಹಾಗೂ ಮಕ್ಕಳಿಗೆ ತಮ್ಮ ಹಕ್ಕುಗಳು ಮತ್ತು ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಕಾನೂನು ಅರೆಕಾಲಿಕ ಸ್ವಯಂಸೇವಕಿ ವೇದಾವತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಬಜಪನ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನ ಮಕ್ಕಳಿಗೆ ತಮ್ಮ ಹಕ್ಕುಗಳು ಮತ್ತು ಕಾನೂನಿನ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಮಹತ್ವದ ವೇದಿಕೆ. ವಿದ್ಯಾರ್ಥಿಗಳು ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಅಪರಿಚಿತರೊಂದಿಗೆ ವ್ಯವಹರಿಸುವಾಗ, ಶಾಲೆಗೆ ಬಂದು ಹೋಗುವಾಗ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕ ಹನುಮಂತರಾಜು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಶಾಲೆ ಮತ್ತು ಮನೆಯಲ್ಲಿ ಸುರಕ್ಷಿತ, ಆರೋಗ್ಯಕರ ಹಾಗೂ ಭಯಮುಕ್ತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳು ತಮಗಾಗುವ ತೊಂದರೆ, ಕಿರುಕುಳ, ಅಸಹಜ ವರ್ತನೆಗಳನ್ನು ಮುಚ್ಚಿಡದೆ ನಿರ್ಭೀತಿಯಿಂದ ಪೋಷಕರು ಅಥವಾ ಶಿಕ್ಷಕರ ಬಳಿ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದರು.
ಅರೆಕಾಲಿಕ ಸ್ವಯಂಸೇವಕಿ ಮಂಜುಳಾ ಮಾತನಾಡಿ, ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ನೆರವು ಪಡೆಯಬಹುದು. ಕೇವಲ ಶಾಲೆಗಳಿಂದ ಮಾತ್ರವಲ್ಲದೆ, ಪೋಷಕರು ಮತ್ತು ಸಮಾಜ ಕೈಜೋಡಿಸಿದಾಗ ಮಾತ್ರ ಮಕ್ಕಳಿಗೆ ಸುರಕ್ಷಿತ ಬಾಲ್ಯ ಕಟ್ಟಿಕೊಡಲು ಸಾಧ್ಯ ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಪೋಟೋ 1 :
ದಾಬಸ್‍ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಬಜಪನ್ ಜಾಗೃತಿ ಅಭಿಯಾನಕ್ಕೆ ತಾಲೂಕು ಕಾನೂನು ಅರೆಕಾಲಿಕ ಸ್ವಯಂಸೇವಕರಾದ ವೇದಾವತಿ, ಮಂಜುಳಾ ಚಾಲನೆ ನೀಡಿದರು. ಮುಖ್ಯಶಿಕ್ಷಕ ಹನುಮಂತರಾಜು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.