ಹಾವೇರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕಸರತ್ತು

KannadaprabhaNewsNetwork |  
Published : Feb 10, 2024, 01:46 AM IST
9ಎಚ್‌ವಿಆರ್‌1, 1ಎ, 1ಬಿ- | Kannada Prabha

ಸಾರಾಂಶ

ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾತ್ರಿಯೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ.

ನಾರಾಯಣ ಹೆಗಡೆಹಾವೇರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಜಿಲ್ಲೆಯ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕ ವರ್ಗ ಹಲವು ರೀತಿಯ ಕಸರತ್ತು ನಡೆಸುತ್ತಿದೆ. ತಾಲೂಕಿನ ಚಿಕ್ಕಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾತ್ರಿಯೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಿ ವಿಶೇಷ ತರಗತಿ ನಡೆಸಲಾಗುತ್ತಿದೆ.ಕಳೆದ ವರ್ಷ ಕಳಪೆ ಫಲಿತಾಂಶದಿಂದ ಎಚ್ಚೆತ್ತ ಇಲಾಖೆ ಅಧಿಕಾರಿಗಳು ಈ ಸಲ ಹೆಚ್ಚಿನ ಸಾಧನೆ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪ್ರೌಢಶಾಲಾ ಶಿಕ್ಷಕರಿಗೆ ಪ್ರೇರೇಪಣೆ ನೀಡುವ ಕಾರ್ಯ ನಡೆದಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿಯಿದ್ದು, ತಾಲೂಕಿನ ಚಿಕ್ಕಲಿಂಗದಹಳ್ಳಿ ಹೈಸ್ಕೂಲ್‌ ಶಿಕ್ಷಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಜೆ ವೇಳೆಗೆ ಬಿಸಿಯೂಟ ನೀಡಿ ನಂತರ ರಾತ್ರಿ 8.30ರ ವರೆಗೂ ವಿಶೇಷ ತರಗತಿ ನಡೆಸುತ್ತಿದ್ದಾರೆ. ಜತೆಗೆ, ವಾರದ ಎಲ್ಲ ದಿನಗಳಂದು 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿಯೇ ಅಭ್ಯಾಸ ಮಾಡಿಸಲಾಗುತ್ತಿದೆ. ಈ ವಿನೂತನ ಪ್ರಯತ್ನಕ್ಕೆ ಪೋಷಕರು ಸಹಕಾರ ನೀಡುತ್ತಿದ್ದು, ಇದೇ ಮಾದರಿಯನ್ನು ಇನ್ನೂ ಅನೇಕ ಶಾಲೆಗಳಲ್ಲಿ ಕೈಗೊಳ್ಳಲು ಶಿಕ್ಷಕರು ಮುಂದಾಗಿದ್ದಾರೆ.

ಹಲವು ಉಪಕ್ರಮ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಈ ಸಾಲಿನ ಆರಂಭದಿಂದಲೇ ಹಲವು ಉಪಕ್ರಮ ಕೈಗೊಂಡಿದೆ. ಪರೀಕ್ಷೆಯಲ್ಲಿ ಬೀಳಬಹುದಾದ ಎಲ್ಲ ವಿಷಯಗಳ ಸಂಭಾವ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಒಳಗೊಂಡ ಕೈಪಿಡಿಗಳನ್ನು ಜಿಲ್ಲೆಯ ಶಿಕ್ಷಣ ಇಲಾಖೆ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ವಿತರಿಸಿದೆ. ಇದು ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಗಲಿದೆ ಎಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.

ಇದಲ್ಲದೇ ವಿದ್ಯಾರ್ಥಿಗಳನ್ನು ದತ್ತು ಪಡೆಯುವ ಯೋಜನೆಯನ್ನು ಕೂಡ ಆರಂಭಿಸಲಾಗಿದೆ. ದತ್ತು ಪಡೆದ ಶಿಕ್ಷಕರು ವಿದ್ಯಾರ್ಥಿ ಮತ್ತು ಅವರ ಪೋಷಕರೊಂದಿಗೆ ನೇರ ಸಂಪರ್ಕದಲ್ಲಿದ್ದು, ಕಲಿಕೆಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ, ಕಲಿಕೆ ಬಗ್ಗೆ, ದೈನಂದಿನ ಅಭ್ಯಾಸದ ಬಗ್ಗೆ ಪೋಷಕರೊಂದಿಗೆ ಮಾಹಿತಿ ಹಂಚಿಕೊಂಡು ವಿದ್ಯಾರ್ಥಿಯ ವೈಯಕ್ತಿಕ ಕಲಿಕೆ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ ಶಾಲೆ ಆರಂಭಕ್ಕೂ ಮುನ್ನ ಮತ್ತು ನಂತರದ ಅವಧಿಯಲ್ಲಿ ನಿತ್ಯವೂ ಬೇರೆ ಬೇರೆ ವಿಷಯದ ಬಗ್ಗೆ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ಗಣಿತ ಮತ್ತು ಇಂಗ್ಲಿಷ್ ವಿಷಯದ ಬಗ್ಗೆ ವಿಶೇಷ ತರಗತಿ ವೇಳೆ ಗಮನ ನೀಡಲಾಗುತ್ತಿದೆ.

ಸರಣಿ ಪರೀಕ್ಷೆ: ಫೆ. 26ರಿಂದ 6 ದಿನಗಳ ಕಾಲ ರಾಜ್ಯಮಟ್ಟದ ಪ್ರಿಪರೇಟರಿ ಪರೀಕ್ಷೆ ನಡೆಯಲಿದ್ದು, ಅಷ್ಟರೊಳಗಾಗಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸರಣಿ ಪರೀಕ್ಷೆ, ರಸಪ್ರಶ್ನೆ ಕಾರ್ಯಕ್ರಮ, ಚರ್ಚೆ ಇತ್ಯಾದಿ ಚಟುವಟಿಕೆ ಮೂಲಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆದಿದೆ. ಶಾಲಾ ಹಂತದಲ್ಲಿ ಕಿರು ಪರೀಕ್ಷೆ, ಜಿಲ್ಲಾ ಮಟ್ಟದಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಈಗಾಗಲೇ ನಡೆಸಲಾಗಿದೆ. ಮಾ. 25ರಿಂದ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ನೀಡಲಾಗಿದೆ. ಈಗಾಗಲೇ ಸರಣಿ ಪರೀಕ್ಷೆ ನಡೆಸಲಾಗಿದ್ದು, ಪೂರ್ವಸಿದ್ಧತಾ ಪರೀಕ್ಷೆಗೆ ಮಕ್ಕಳು ಸಜ್ಜಾಗಿದ್ದಾರೆ. ಶಾಲಾ ಅವಧಿಯ ನಂತರವೂ ವಿಶೇಷ ತರಗತಿ ನಡೆಸಲಾಗುತ್ತಿದೆ. ಈ ಸಲ 23,887 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಿದೆ ಎಂದು ಹಾವೇರಿ ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.

PREV

Recommended Stories

ಶಿಕ್ಷಕರು ಬಡವರಾದ್ರು, ಹೃದಯದಿಂದ ಶ್ರೀಮಂತರು
ಕೈ ಹಿಡಿದು ದಡ ಸೇರಿಸುವುದು ಶಿಕ್ಷಕ ಮಾತ್ರ