ಮೀಸಲಾತಿ ಪ್ರಕಟ ಬೆನ್ನೆಲೆ ಅಧಿಕಾರಕ್ಕಾಗಿ ಕಸರತ್ತು

KannadaprabhaNewsNetwork | Published : Aug 10, 2024 1:32 AM

ಸಾರಾಂಶ

ನಗರಸಭೆಯ ಅಧ್ಯಕ್ಷ , ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಗದ್ದುಗೆ ಹಿಡಿಯಲು ತೆರೆ-ಮರೆಯ ಕಸರತ್ತು ಪ್ರಾರಂಭವಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರಸಭೆಯ ಅಧ್ಯಕ್ಷ , ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಗದ್ದುಗೆ ಹಿಡಿಯಲು ತೆರೆ-ಮರೆಯ ಕಸರತ್ತು ಪ್ರಾರಂಭವಾಗಿದೆ.

ಈ ಬಾರಿ ಅಧ್ಯಕ್ಷಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮೀಸಲಿಗೆ ಒಲಿದಿದೆ. ಈ ಹಿನ್ನೆಲೆಯಲ್ಲಿ ಉಳಿದ ಅವಧಿಯ ಅಧಿಕಾರಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜಮಖಂಡಿ ನಗರ ಸಭೆಯಲ್ಲಿ ಒಟ್ಟು 31 ಸದಸ್ಯರಿದ್ದಾರೆ. ಈ ಪೈಕಿ ಕಾಂಗ್ರೆಸ್‌ನ 21, ಬಿಜೆಪಿಯ 7 ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ವಿಳಂಬವಾಗಿದ್ದರಿಂದ ಅಧಿಕಾರಿಗಳೇ 15 ತಿಂಗಳು ಆಡಳಿತ ನಡೆಸಿದ್ದಾರೆ. ಮೊದಲಿನ ಅವಧಿಯಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಸಿದ್ದು ಮೀಸಿ, ದಾನೇಶ ಘಾಟಿಗೆ ತಮ್ಮ ಅವಧಿ ಪೂರ್ಣಗೊಳಿಸಿದ್ದಾರೆ.

ಬಿಜೆಪಿಯ 7 ಸದಸ್ಯರು, ಪಕ್ಷೇತರರು 3 ಹಾಗೂ ಶಾಸಕ ಮತ್ತು ಸಂಸದರ ಮತಗಳು ಸೇರಿ ಒಟ್ಟು 12 ಮತಗಳು ಬಿಜೆಪಿಯ ಬಳಿ ಭದ್ರವಾಗಿವೆ. ಮ್ಯಾಜಿಕ್‌ ನಂಬರ್‌ ಪಡೆಯಲು ಇನ್ನೂ ನಾಲ್ಕು ಮತಗಳು ಬೇಕಾಗುತ್ತದೆ. ಬಿಜೆಪಿ ಇತ್ತೀಚೆಗೆ ನಡೆದ ತಾಲೂಕು ಹುಟ್ಟುವಳಿ ಮಾರಾಟ ಸಮಿತಿ ಮತ್ತು, ಅರ್ಬನ್‌ ಬ್ಯಾಂಕ್‌ ಚುನಾವಣೆಗಳಲ್ಲಿ ತನ್ನ ಮೇಲುಗೈ ಸಾಧಿಸಿದೆ. ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಗರಸಭೆಯ ಗದ್ದುಗೆ ಹಿಡಿಯಲು ಬಿಜೆಪಿ ಕಸರತ್ತು ನಡೆಸುತ್ತದೆ ಎಂಬ ಮುಂದಾಲೋಚನೆಯಿಂದ ಕಾಂಗ್ರೆಸ್‌ ತನ್ನ ಸದಸ್ಯರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳವ ತಂತ್ರರೂಪಿಸಿದೆ. 20 ಜನ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿಕೊಟ್ಟಿದೆ.

ಕಾಂಗ್ರೆಸ್‌ನ ಸದಸ್ಯರು ಪ್ರವಾಸದಲ್ಲಿದ್ದು, ಬಿಜೆಪಿಯ ಸದಸ್ಯರು ಮೈಸೂರು ಪಾದಯಾತ್ರೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ಅಧ್ಯಕ್ಷರ ಗಾದಿ ಹಿಡಿಯಲು ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತವಿದ್ದರೂ ಪೈಪೂಟಿ ನಡೆದು, ಭಿನ್ನಾಭಿಪ್ರಾಯ ಮೂಡಿ ಬಿಜಿಪಿಗೆ ಲಾಭ ವಾಗಬಾರದೆಂಬ ಉದ್ದೇಶದಿಂದ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಲಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಬಿಜೆಪಿಗೆ ಅಂದುಕೊಂಡಷ್ಟು ಸುಲಭವಾಗಿ ಅಧ್ಯಕ್ಷಸ್ಥಾನ ದಕ್ಕುವುದಿಲ್ಲ ಎಂಬುವುದರಲ್ಲಿ ಎರಡು ಮಾತಿಲ್ಲವಾದರೂ, ಅಧ್ಯಕ್ಷ ಸ್ಥಾನ ಜನರಲ್‌ ಕೆಟಗರಿಗೆ ಒಲಿದಿರುವುದರಿಂದ ಕಾಂಗ್ರೆಸ್‌ನಲ್ಲೂ ಪೈಪೊಟಿಗೆ ಕಾರಣವಾಗಿದೆ. ಹಿರಿಯ ಸದಸ್ಯರಲ್ಲಿ ಅಧ್ಯಕ್ಷ ಪಟ್ಟಕ್ಕೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ಆದರೆ ಸಮಯ ಬರುವ ವರೆಗೆ ಕಾಯಬೇಕಾಗಿರುವುದು ಅನಿವಾರ್ಯ.

Share this article