ಕನ್ನಡಪ್ರಭ ವಾರ್ತೆ ಉಡುಪಿ
ಕಲೆ, ನೃತ್ಯ, ಸಂವಹನ, ನಾಟಕ, ರಂಗ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಅದಿತಿ ಕಲಾ ಗ್ಯಾಲರಿಯಲ್ಲಿ ಮೇ 17 ರಿಂದ 19 ರವರೆಗೆ 1890-1947 ರ ಅವಧಿಯ ಭಿತ್ತಿಪತ್ರ, ಬಟ್ಟೆ ಲೇಬಲ್, ಬೆಂಕಿ ಪೊಟ್ಟಣದ ಮೇಲಿನ ಲೇಬಲ್ ಗಳ ‘ಕಲ್ಲಚ್ಚು ಕಲಾ ಪ್ರದರ್ಶನ’ ಆಯೋಜಿಸಲಾಗಿದೆ ಎಂದು ಅದಿತಿ ಆರ್ಟ್ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ: ಕಿರಣ್ ಆಚಾರ್ಯ ಗ್ಯಾಲರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ಮೂಲ ಪ್ರತಿಗಳನ್ನು ಬಹು ಪ್ರತಿಗಳನ್ನಾಗಿ ಮಾಡುವ ಸಂಪ್ರದಾಯಬದ್ಧ ಕಲೆಯೇ ಕಲ್ಲಚ್ಚು. ಇದೊಂದು ಪುರಾತನ ಮುದ್ರಣ ತಂತ್ರಗಾರಿಕೆ. ಕಲ್ಲಿನ ಮೇಲೆ ಚಿತ್ರಿಸಿ ಅದನ್ನು ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ ಅದರ ಮೂಲಕ ಪ್ರತಿಗಳನ್ನು ತೆಗೆಯುವ ಕಲೆ. ಪುರಾಣ ಕಥೆಗಳಲ್ಲಿ ಬರುವ ದೇವ -ದೇವತೆಯರ ಚಿತ್ರಗಳು ಕಲ್ಲಚ್ಚು ಮುದ್ರಣ ವಿಧಾನದ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ಮಾಡಿತು. ಇದರಿಂದಾಗಿ ಶ್ರೀ ಸಾಮಾನ್ಯರೂ ದೇವರನ್ನು ಚಿತ್ರದ ಮೂಲಕವೂ ಆರಾಧಿಸುವಂತೆ ಮಾಡಿತು. ಕಣ್ಣಿಗೆ ಮುದ ನೀಡುವ ವರ್ಣಭರಿತ ಚಿತ್ರಗಳು ಮನೆಗಳಲ್ಲಿ, ಅಂಗಡಿಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ನೆಲೆ ಕಂಡವು. ಆಧ್ಯಾತ್ಮಿಕತೆ, ಹಬ್ಬ ಹರಿದಿನ ಹಾಗೂ ಜೀವನದ ಕಾಲಚಕ್ರವನ್ನು ನೆನಪಿಸುವ ಮಾಧ್ಯಮಗಳಾದವು. ಪುರಾತನ ಕಲ್ಲಚ್ಚು ಕಲಾಕೃತಿಗಳ ಸಂರಕ್ಷಣೆ, ಅಧ್ಯಯನ ಮತ್ತು ಈ ಮೂಲಕವಾದ ಸಾಮಾಜಿಕ ಬದಲಾವಣೆಗಳ ದಾಖಲೀಕರಣ ಈ ಪ್ರದರ್ಶನದ ಉದ್ದೇಶವಾಗಿದೆ ಡಾ. ಆಚಾರ್ಯ ಮಾಹಿತಿ ನೀಡಿದ್ದಾರೆ.
ಮೇ 17 ರಂದು ಬೆಳಗ್ಗೆ 10.30 ಕ್ಕೆ ಮುದ್ರಣ ಕ್ಷೇತ್ರದ ಯಶಸ್ವಿ ಉದ್ಯಮಿ ಮಂಗಳೂರಿನ ನೇಮಿರಾಜ್ ಶೆಟ್ಟಿ ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಉಡುಪಿ ಪ್ರಸಿದ್ಧ ಕಲಾವಿದ ಮತ್ತು ಸಂಶೋಧಕ ಡಾ. ಜನಾರ್ದನ ಹಾವಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 7 ರ ವರೆಗೆ ಕಲಾಕೃತಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಗ್ಯಾಲರಿಯ ವಿಶ್ವಸ್ಥರಾದ ಶ್ರೀನಿವಾಸ, ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.