ಬೆಂ-ಮೈ ಹೆದ್ದಾರೀಲಿ ಬಿಡದಿ ಬಳಿ ಎಕ್ಸಿಟ್‌ ಬಂದ್‌

KannadaprabhaNewsNetwork | Published : Feb 8, 2025 12:34 AM

ಸಾರಾಂಶ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ಕೊಟ್ಟಿದೆ.

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ಕೊಟ್ಟಿದೆ.

ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಕಟ್ಟದೆ ಎಸ್ಕೇಪ್‌ ಆಗುವುದನ್ನು ತಪ್ಪಿಸಲು ಬಿಡದಿ ಬಳಿಯ ನಿರ್ಗಮನ (ಎಕ್ಸಿಟ್) ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದೆ. ಈ ಮೂಲಕ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಇದ್ದ ಸಂಪರ್ಕವನ್ನು ಕಡಿತಗೊಳಿಸಿದೆ.

ಮೈಸೂರಿನಿಂದ ಬರುತ್ತಿದ್ದ ವಾಹನ ಸವಾರರು ಬಿಡದಿಯಿಂದ ಮುಂದೆ ಸರ್ವೀಸ್‌ ರಸ್ತೆಗೆ ಇಳಿದು ಟೋಲ್‌ ತಪ್ಪಿಸಿಕೊಳ್ಳುತ್ತಿದ್ದರು. ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸಿ ಶೇಷಗಿರಿಹಳ್ಳಿ ಬಳಿ ಟೋಲ್ ಕಟ್ಟದೇ ಸರ್ವೀಸ್ ರಸ್ತೆ ಮೂಲಕ ಬೆಂಗಳೂರು ತಲುಪುತ್ತಿದ್ದರು. ಹೀಗಾಗಿ ಟೋಲ್‌ ತಪ್ಪಿಸುವ ವಾಹನಗಳಿಗೆ ಕಡಿವಾಣ ಹಾಕಲು ಹೆದ್ದಾರಿ ಪ್ರಾಧಿಕಾರ ಎಂಟ್ರಿಗೆ ಮಾತ್ರ ಅವಕಾಶ ಕೊಟ್ಟು, ಎಕ್ಸಿಟ್‌ ರಸ್ತೆಯನ್ನು ಬಂದ್‌ ಮಾಡಿದೆ.

ಇದೀಗ ಇದಕ್ಕೆ ಹೆದ್ದಾರಿ ಪ್ರಾಧಿಕಾರ ಸರ್ವಿಸ್ ರಸ್ತೆಯನ್ನೇ ಬಂದ್ ಮಾಡಿದೆ. ಹೀಗಾಗಿ ಬೆಂಗಳೂರಿಗೆ ಬರುವ ವಾಹನ ಸವಾರರು ಶೇಷಗಿರಿಹಳ್ಳಿ ಟೋಲ್ ಪಾವತಿಸಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಹೆದ್ದಾರಿ ಪ್ರಾಧಿಕಾರದ ನಡೆಗೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಸೂಚನಾ ಫಲಕವನ್ನೂ ಅಳವಡಿಸದೆ ಏಕಾಏಕಿ ಎಕ್ಸಿಟ್‌ ರಸ್ತೆಯನ್ನು ಬಂದ್‌ ಮಾಡಿರುವುದು ಸರಿಯಲ್ಲ. ರಾಮನಗರದಿಂದ ಬೆಂಗಳೂರಿಗೆ ಹೋಗುವುದಕ್ಕೂ ದುಬಾರಿ ಟೋಲ್ ಕಟ್ಟಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಟೋಲ್ ಶುಲ್ಕ ವಿಚಾರವಾಗಿ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಸರ್ವಿಸ್ ರಸ್ತೆ ಪೂರ್ಣಗೊಳಿಸದೆ ಟೋಲ್ ವಿಧಿಸಬಾರದೆಂದು ವಿವಿಧ ಸಂಘಟನೆಗಳು ಮಾತ್ರವಲ್ಲದೆ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೂ ಟೋಲ್ ಶುಲ್ಕ ಸಂಗ್ರಹಣೆ ಆರಂಭವಾದ ಬಳಿಕ ಮೂರು ಬಾರಿ ಪರಿಷ್ಕರಣೆಗೆ ಒಳಪಟ್ಟಿತು.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 2023 ಜು.1 ರಿಂದ ಪೂರ್ಣ ಪ್ರಮಾಣದ ಟೋಲ್ ಸಂಗ್ರಹಣೆ ಆರಂಭವಾಗಿತ್ತು. ರಾಜ್ಯದಲ್ಲಿರುವ ಬೇರೆ ರಾಷ್ಟ್ರೀಯ ಹೆದ್ದಾರಿಗಳಿಗೆ ಹೋಲಿಕೆ ಮಾಡಿದಲ್ಲಿ ಬೆಂಗಳೂರು – ಮೈಸೂರು ನಡುವಿನ ಎಕ್ಸ್ ಪ್ರೆಸ್ ವೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕಣ್ಮಣಿಕೆ – ಶೇಷಗಿರಿಹಳ್ಳಿ ಟೋಲ್ ನಲ್ಲಿ 278.91 ಕೋಟಿ ರು. ಸಂಗ್ರವಾಗಿತ್ತು. ಇನ್ನು 2024-25ನೇ ಸಾಲಿನಲ್ಲಿ 167.32 ಕೋಟಿ ರು. ಟೋಲ್ ಶುಲ್ಕ ವಸೂಲಿಯಾಗಿತ್ತು.

ಬಾಕ್ಸ್ ............

ಶೀಘ್ರವೇ ವಾರ್ಷಿಕ ಟೋಲ್‌ ಪಾಸ್‌:

ಇನ್ನೂ ಟೋಲ್‌ ಸಂಗ್ರಹದಲ್ಲಿ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ಹಾಗೂ ಕಾರು ಮಾಲೀಕರಿಗೆ ಅನುಕೂಲ ಮಾಡಿಕೊಡಲು ʻವಾರ್ಷಿಕ ಟೋಲ್‌ ಪಾಸ್‌ʼ ವ್ಯವಸ್ಥೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ. ಅದರಂತೆ ಒಮ್ಮೆಲೆ 3 ಸಾವಿರ ರು. ಪಾವತಿಸಿ ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಟೋಲ್‌ಗಳಲ್ಲಿ ಸಂಚಾರ ಮಾಡಬಹುದು. 30 ಸಾವಿರ ರು.ಪಾವತಿಸಿದರೆ ʻಜೀವಮಾನದ ಪಾಸ್‌ʼ ಒದಗಿಸುವ ಸಾಧ್ಯತೆಯೂ ಇದೆ. 300 ಸಾವಿರ ರು.ಗಳ ಪಾಸ್‌ ಪಡೆದರೆ 15 ವರ್ಷಗಳವರೆಗೆ ಟೋಲ್‌ಗಳಲ್ಲಿ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಮೂಲಗಳು ತಿಳಿಸಿವೆ.

7ಕೆಆರ್ ಎಂಎನ್ 2,3.ಜೆಪಿಜಿ

ಬಿಡದಿ ಬಳಿ ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಎಕ್ಸಿಟ್ ರಸ್ತೆಯನ್ನು ಬಂದ್ ಮಾಡಿರುವುದು.

Share this article