ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಕಾಡಂಚಿನಲ್ಲಿ 23 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಕಾಡಂಚಿನಲ್ಲಿ 23 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಇತ್ತೀಚೆಗೆ ರಾಮನಗರದಲ್ಲಿ ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಹಾಗೂ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿಯಲ್ಲಿ ಕಾಡಾನೆ ಹಾವಳಿಯಿಂದ ನೊಂದ ರೈತರ ಅಹವಾಲು ಆಲಿಸಿದ್ದರು.
ಚನ್ನಪಟ್ಟಣ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಆನೆಗಳು ಸಾಕಷ್ಟು ಬೆಳೆನಾಶ ಮಾಡಿದ್ದು, ರೈತರು ಆತಂಕಕ್ಕೀಡಾಗಿದ್ದ ಸಮಯದಲ್ಲಿ ಶತಾಯ ಗತಾಯ ಆನೆ ಹಾವಳಿ ನಿಯಂತ್ರಿಸಬೇಕೆಂದು ಪುಂಡಾನೆಗಳ ಸೆರೆಗೆ ಅನುಮತಿ ತಂದು ಆರು ಆನೆಗಳನ್ನು ಹಿಡಿಯಲಾಗಿತ್ತು.
ಜಿಲ್ಲೆಯಲ್ಲಿ ಆನೆಗಳ ಸಂತತಿ ಹೆಚ್ಚಿರುವ ಕಾರಣ ಆನೆ ಹಾವಳಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಆಗ ಚನ್ನಪಟ್ಟಣ ಶಾಸಕ ಯೋಗೇಶ್ವರ್, ಇಲಾಖಾ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಂವಾದ ನಡೆಸಿ ಅನೇಕ ಉಪ ಕ್ರಮಗಳನ್ನು ಕೈಗೊಂಡರು. ಆನೆ ಹಾವಳಿ ತಡೆಯಬೇಕೆಂಬ ಉದ್ದೇಶದಿಂದ ರಾಮನಗರ ಜಿಲ್ಲೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಕರೆಸಿ ಸಮಸ್ಯೆ ಮನವರಿಕೆ ಮಾಡುವ ಜೊತೆಗೆ ಆನೆ ಹಾವಳಿ ತಡೆ ಸಂಬಂಧ ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ಆನೆ ಶಿಬಿರ ಸೇರಿ ಕೆಲ ಅಹವಾಲುಗಳನ್ನು ಸಲ್ಲಿಸಲಾಗಿತ್ತು.
ಇದಕ್ಕೆ ಸಚಿವ ಈಶ್ವರ್ ಖಂಡ್ರೆ ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ತಕ್ಷಣವೇ 26 ಕಿಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 40 ಕೋಟಿ ರುಪಾಯಿ ಹಣ ಹಂಚಿಕೆ ಮಾಡುವ ಭರವಸೆ ನೀಡಿದ್ದರು.
ಇದಾದ ಮೂರು ದಿನಗಳಲ್ಲಿಯೇ ಅರಣ್ಯ ಇಲಾಖೆ 2024-25ನೇ ಸಾಲಿನ ಆಯವ್ಯಯದ ಎರಡನೇ ಪೂರಕ ಅಂದಾಜಿನಲ್ಲಿ ಕಾಡಾನೆ ಹಾವಳಿಯಿಂದ ಉಂಟಾಗುವ ಬೆಳೆಹಾನಿ, ಪ್ರಾಣ ಹಾನಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಗಾಗಿ ಹಂಚಿಕೆಯಾಗಿರುವ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದೆ.
ಕಾಡಾನೆಗಳ ಹಾವಳಿ ತಪ್ಪಿಸಲು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 8.50 ಕಿ.ಮೀ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 15 ಕಿ.ಮೀವರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಆನೆಗಳ ಹಾವಳಿಯಿಂದ ಉಂಟಾಗುವ ಬೆಳೆ ಹಾನಿ, ಪ್ರಾಣ ಹಾನಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಗಳು ಸಹಕಾರಿಯಾಗಲಿವೆ.
5 ಜಿಲ್ಲೆಗಳ 11 ವಿಧಾನಸಭಾ ಕ್ಷೇತ್ರಗಳಿಗೆ 150 ಕೋಟಿ ಅನುದಾನ:
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಕಾಡಾನೆಗಳ ಹಾವಳಿ ಹೆಚ್ಚಾಗಿರುವ 5 ಜಿಲ್ಲೆಗಳ 11 ವಿಧಾನಸಭಾ ಕ್ಷೇತ್ರಗಳ 103 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಉದ್ದೇಶಿಸಿದೆ. ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದಲ್ಲಿ 8.50 ಕಿ.ಮೀ, ರಾಮನಗರ ಕ್ಷೇತ್ರದಲ್ಲಿ 15 ಕಿ.ಮೀ.ವರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆಗಲಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ನಮ್ಮ ಅಹವಾಲಿಗೆ ಸ್ಪಂದಿಸಿ ರಾಮನಗರ ಜಿಲ್ಲೆಯಲ್ಲಿ ಆನೆ ಹಾವಳಿ ತಡೆಯುವ ಸಲುವಾಗಿ 23 ಕಿ.ಮೀ. ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕೆ ಸಮ್ಮತಿಸಿ ಸುಮಾರು 35 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೆ ಹಾಗೂ ತಕ್ಷಣವೇ ಕೆಲಸ ಪ್ರಾರಂಭಿಸುವಂತೆ ಸೂಚಿಸಿರುವುದು ಸ್ವಾಗತಾರ್ಹವಾಗಿದೆ. ಈಗಾಗಲೇ ಆನೆ ಹಾವಳಿ ತಡೆಯುವ ನಿಟ್ಟಿನಲ್ಲಿ ಇರುವ ಎಲ್ಲಾ ಮಾರ್ಗೋಪಾಯಗಳನ್ನು ಅಧಿಕಾರಿಗಳ ಜೊತೆ ಸೇರಿ ಮಾಡಲಾಗುತ್ತಿದ್ದು, ಬಾಕಿ ಉಳಿದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಂಡರೆ ತಕ್ಕಮಟ್ಟಿಗೆ ಆನೆ ಹಾವಳಿಯನ್ನು ನಿಯಂತ್ರಿಸಬಹುದಾಗಿದೆ.
-ಸಿ.ಪಿ.ಯೋಗೇಶ್ವರ್, ಶಾಸಕರು, ಚನ್ನಪಟ್ಟಣ ಕ್ಷೇತ್ರ