ಉಡುಪಿ ಜಿಲ್ಲೆಯ ರಾಹೆ ಕಾಮಗಾರಿ ತ್ವರಿತಗೊಳಿಸಿ: ಸಂಸದ ಕೋಟ

KannadaprabhaNewsNetwork |  
Published : Nov 01, 2024, 12:01 AM IST
30ಎನ್ಎಚ್ | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಹೆ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗಳು, ಮೇಲ್ಸೇತುವೆ ಕಾಮಗಾರಿ, ಅಂಡರ್‌ಪಾಸ್ ಹಾಗೂ ಹೆದ್ದಾರಿ ನಿರ್ವಹಣೆ ಕಾಮಗಾರಿಗಳನ್ನು ವಿಳಂಬವಿಲ್ಲದೇ ತ್ವರಿತವಾಗಿ ಕೈಗೊಳ್ಳುವುದರೊಂದಿಗೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಹೆ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾ.ಹೆ 66 ರ ಸಂತೆಕಟ್ಟೆ ರಾಹೆ ಸೈಡ್ ವಾಲ್ ಅನ್ನು ನವೆಂಬರ್ ಒಳಗಾಗಿ ಪೂರ್ಣಗೊಳಿಸಬೇಕು. ಅದರ ಪಕ್ಕದಲ್ಲಿರುವ ಸರ್ವೀಸ್ ರಸ್ತೆ ಕಾಮಗಾರಿಗಳನ್ನು ಸಹ ನಿರ್ಮಾಣ ಮಾಡಲು ಕೂಡಲೇ ಯೋಜನಾ ವರದಿಯನ್ನು ತಯಾರಿಸಿ, ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದರು. ರಾಹೆ 169 ಎ ಇದರ ಪರ್ಕಳ ಸಮೀಪ ಕಾಮಗಾರಿಗೆ ನ್ಯಾಯಾಲಯದ ಆದೇಶವು ಸರ್ಕಾರದ ಪರವಾಗಿ ಆಗಿದ್ದು, ಭೂಮಾಲೀಕರಿಗೆ ಕೂಡಲೇ ಭೂ ಸ್ವಾಧೀನದ ಪರಿಹಾರದ ಹಣವನ್ನು ನೀಡಬೇಕು. ಕಾಮಗಾರಿಯನ್ನು ಸಹ ಪ್ರಾರಂಭಿಸಬೇಕು. ಪೆರ್ಡೂರಿನ ಅನಂತೇಶ್ವರ ದೇವಸ್ಥಾನ ವ್ಯಾಪ್ತಿಯ 600 ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಸಂಬಂಧ ನ್ಯಾಯಾಲಯವು ತಡೆ ಆಜ್ಞೆ ನೀಡಿದೆ. ದೇವಸ್ಥಾನ, ಕಲ್ಯಾಣಿಯ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದೆಂಬುದು ಭಕ್ತರ ಬೇಡಿಕೆಯಿದೆ. ಇದನ್ನು ಮನಗಂಡು ಕಾಮಗಾರಿ ಕೈಗೊಳ್ಳಬೇಕು ಎಂದರು.ಕರಾವಳಿ ಜಂಕ್ಷನ್ನಿಂದ ಮಲ್ಪೆ ಜಂಕ್ಷನ್ ವರೆಗಿನ ರಾಹೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದರೊಂದಿಗೆ ಭೂ ಮಾಲೀಕರಿಗೆ ಪರಿಹಾರದ ಹಣವನ್ನು ನ 10 ರೊಳಗೆ ಪಾವತಿಸಿ, ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು ಎಂದರು.ರಾ.ಹೆ 66 ರ ಹೆಜಮಾಡಿ ಹಾಗೂ ಸಾಸ್ತಾನದ ಟೋಲ್ ಗೇಟ್ ನ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ಜನರ ವಾಹನಗಳಿಗೆ ರಿಯಾಯಿತಿ ನೀಡಬೇಕು ಎಂದರು.ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕು. ರೈಲ್ವೆ ಇಲಾಖೆ, ರಾಹೆ ವಿಭಾಗದವರು ಹಾಗೂ ಗುತ್ತಿಗೆದಾರರುಗಳು ಸಮನ್ವಯದೊಂದಿಗೆ ಪರಿಶೀಲನೆ, ಅನುಮತಿ, ರೈಲ್ವೆ ಹಳಿಗಳ ಮೇಲೆ ಗರ್ಡರ್ ಕೂರಿಸುವಿಕೆಗೆ ಎಲ್ಲ ರೀತಿಯ ಪೂರ್ವ ತಯಾರಿಗಳನ್ನು ಕೈಗೊಂಡು, ನವೆಂಬರ್ ತಿಂಗಳ ಅಂತ್ಯದ ಒಳಗಾಗಿ ಮುಗಿಸಲು ಮುಂದಾಗಬೇಕು ಎಂದರು.ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಎ ಸುವರ್ಣ, ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಡಿಎಫ್ಓ ಗಣಪತಿ, ಸಹಾಯಕ ಕಮೀಷನರ್ ಮಹೇಶ್ಚಂದ್ರ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಹೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ