ಜಿಲ್ಲೆಯ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ: ನಗರಾಭಿವೃದ್ಧಿ ಪ್ರಾಧಿಕಾರದ ಮಹಮದ್ ಅಸ್ಗರ್

KannadaprabhaNewsNetwork |  
Published : Nov 1, 2024 12:00 AM IST
31ಸಿಎಚ್‌ಎನ್‌55ಚಾಮರಾಜನಗರ ಚುಡಾ ಕಚೇರಿಯಲ್ಲಿ  ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಅಧ್ಯಕ್ಷತೆಯಲ್ಲಿ ನೂತನ ಸದಸ್ಯರೊಂದಿಗೆ ಪ್ರಾಧಿಕಾರ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿರುವ ನಗರವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ನೂತನ ಸದಸ್ಯರು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಸಹಕಾರ ನೀಡಬೇಕೆಂದು ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ) ತಿಳಿಸಿದರು. ಚಾಮರಾಜನಗರದಲ್ಲಿ ನಾಮ ನಿರ್ದೇಶನಗೊಂಡು ಸದಸ್ಯರನ್ನು ಅಭಿನಂದಿಸಿದ ಬಳಿಕ ನಡೆದ ಪ್ರಥಮ ಸಭೆಯಲ್ಲಿ ಮಾತನಾಡಿದರು.

ಪ್ರಥಮ ಸಭೆ । ಚುಡಾ ಆಡಳಿತದ ನೂತನ ನಿರ್ದೇಶಕರಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕೇಂದ್ರದಲ್ಲಿರುವ ನಗರವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ನೂತನ ಸದಸ್ಯರು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಸಹಕಾರ ನೀಡಬೇಕೆಂದು ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ) ತಿಳಿಸಿದರು.

ನಗರದ ಚುಡಾ ಕಚೇರಿಯಲ್ಲಿ ಚುಡಾ ಸದಸ್ಯರಾಗಿ ನಾಮ ನಿರ್ದೇಶನಗೊಂಡು ಸದಸ್ಯರನ್ನು ಅಭಿನಂದಿಸಿದ ಬಳಿಕ ನಡೆದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಜಿಲ್ಲಾ ಕೇಂದ್ರದಲ್ಲಿರುವ ನಗರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರಕ್ಕೆ ನಮ್ಮನ್ನು ನೇಮಕ ಮಾಡಿದೆ. ಸಚಿವರು, ಸಂಸದರು ಹಾಗೂ ಶಾಸಕರ ಆಶಯದಂತೆ ಕಾರ್ಯನಿರ್ವಹಿಸುವ ಜತೆಗೆ ವಿಶೇಷ ಅನುದಾನವನ್ನು ತರುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮ ರೂಪುಗೊಳ್ಳಬೇಕು. ನಗರಾಭಿವೃದ್ದಿ ಸಚಿವರನ್ನು ಶಾಸಕರ ನೇತೃತ್ವದಲ್ಲಿ ಭೇಟಿ ಮಾಡಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ, ಹೊಸ ಬಡಾವಣೆಗಳ ಅಭಿವೃದ್ಧಿ ಮತ್ತು ಮೂಲಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ತಿಳಿಸಿದರು.

ನಗರಸಭೆಗೆ ಪ್ರಾಧಿಕಾರದಿಂದ ಆಗಿಂದಾಗ್ಗೆ ಸಲಹೆ ಸೂಚನೆಗಳನ್ನು ನೀಡುವ ಜತೆಗೆ ಪ್ರಾಧಿಕಾರಕ್ಕೆ ಬರುವ ಅರ್ಜಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ, ಅದಾಯ ಕ್ರೋಢೀಕರಣ, ನಗರದ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಹೊಸ ಬಡಾವಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಪ್ರಾಧಿಕಾರದ ಮಾರ್ಗಸೂಚಿಯಂತೆ ಬಡಾವಣೆಗಳನ್ನು ನಿರ್ಮಾಣ ಮಾಡಿ, ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಧಿಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ಕಾನೂನ್ಮಾತಕವಾಗಿ ನೀಡೋಣ. ಈ ನಿಟ್ಟಿನಲ್ಲಿ ಸದಸ್ಯರು ಪ್ರಾಧಿಕಾರದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನೂತನ ಸದಸ್ಯರಾದ ಎಸ್.ರಾಜು, ರಾಜೇಂದ್ರ (ದ್ವಾರಕಿ), ಪುಟ್ಟಸ್ವಾಮಿ ಹಾಗೂ ಅಂಬಿಕಾ ಅವರನ್ನು ಪ್ರಾಧಿಕಾರದ ಆಯುಕ್ತೆ ಸೀಮಾ ಅವರು ಅಭಿನಂದಿಸುವ ಜತೆಗೆ ಇತರೇ ಅಧಿಕಾರಿಗಳಿಗೆ ಸದಸ್ಯರ ಪರಿಚಯ ಮಾಡಿಕೊಟ್ಟರು.

ಬಳಿಕ ಮಾತನಾಡಿದ ಸದಸ್ಯರು, ನಗರದ ಅಭಿವೃದ್ದಿ ವಿಚಾರದಲ್ಲಿ ನಮ್ಮೆಲ್ಲರ ಸಂಪೂರ್ಣ ಸಹಕಾರ ಇದೆ. ಜಿಲ್ಲೆಯಾದ ನಂತರ ನಗರಕ್ಕೆ ಕೈಗಾರಿಕೆಗಳು, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಚಾಮುಲ್, ಕೃಷಿ ಕಾಲೇಜು ಸೇರಿದಂತೆ ಅನೇಕ ಸಂಸ್ಥೆಗಳು ಸ್ಥಾಪನೆಗೊಂಡಿವೆ. ಅಲ್ಲದೇ ನಗರವು ಹೆಚ್ಚಿನ ರೀತಿಯಲ್ಲಿ ಬೆಳೆಯುತ್ತಿದೆ. ಜನರಿಗೆ ಮೂಲಸೌಲಭ್ಯವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ನಮ್ಮ ಅಧ್ಯಕ್ಷರಿಗೆ ಸಲಹೆ, ಸೂಚನೆಗಳನ್ನು ನೀಡಲು ಬದ್ಧರಾಗಿದ್ದೇವೆ. ಇದರೊಟ್ಟಿಗೆ ಕಾರ್ಯಯೋಜನೆಗಳಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ತಿಳಿಸಿದರು.

ಪ್ರಾಧಿಕಾರದ ಸದಸ್ಯರಾದ ಎಸ್.ರಾಜು, ರಾಜೇಂದ್ರ (ದ್ವಾರಕಿ), ಪುಟ್ಟಸ್ವಾಮಿ, ಅಂಬಿಕಾ, ಚುಡಾ ಸಹಾಯಕ ಎಂಜಿನಿಯರ್ ದಿದೇಶ್, ತಾಂತ್ರಿಕ ಅಧಿಕಾರಿ ಐಶ್ವರ್ಯ, ನೌಕರರಾದ ಚಂದ್ರು, ಲಿಂಗರಾಜು ಇದ್ದರು.

PREV