ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

KannadaprabhaNewsNetwork |  
Published : Nov 01, 2024, 12:00 AM IST
55 | Kannada Prabha

ಸಾರಾಂಶ

ಮಾರುಕಟ್ಟೆಯಲ್ಲಿ ಗಿಜಿಗುಡುವ ಜನಸಂದಣಿಯಿಂದ ಕಾಲಿಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಸ್ತುಗಳ ಬೆಲೆ ಗಗನಮುಖಿಯಾಗಿದ್ದರೂ ಗ್ರಾಹಕರು ಮಾತ್ರ ಮುಗಿಬಿದ್ದು ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಹುಬ್ಬಳ್ಳಿ:

ದೀಪಾವಳಿ ಹಬಕ್ಕೆ ಬೆಲೆ ಏರಿಕೆಯ ಬಿಸಿ ತಾಗಿದ್ದು, ಗ್ರಾಹಕರ ಜೇಬು ಖಾಲಿಯಾಗುವಂತಾಗಿದೆ. ಆದರೂ ಮಾರುಕಟ್ಟೆಗಳಲ್ಲಿ ಜನಸಂದಣಿ ಕಡಿಮೆಯಾಗಿಲ್ಲ. ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆಯಿಂದ ಭರ್ಜರಿ ವ್ಯಾಪಾರ, ವಹಿವಾಟು ನಡೆಯಿತು.

ಹಿಂದೂಗಳ ಪಾಲಿಗೆ ದೀಪಾವಳಿ ದೊಡ್ಡ ಹಬ್ಬ. ಮನೆ-ಮನೆಗಳಲ್ಲೂ ದೀಪ ಬೆಳಗಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಸರ್ವೇ ಸಾಮಾನ್ಯ. ಅದರಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಸಲು ಮಾರುಕಟ್ಟೆಗೆ ತೆರಳಿದರೆ ಬೆಲೆ ಕೇಳಿ ಹೌಹಾರುವುದಂತೂ ಖಚಿತ. ಎಲ್ಲರೂ ಹೂವು. ಕಾಯಿ, ಹಣ್ಣು, ಕಬ್ಬು, ಮಾವಿನ ಸೊಪ್ಪು, ಬಾಳೆಕಂದು, ಪೂಜಾ ಸಾಮಗ್ರಿ ಇತರೆ ಅಗತ್ಯ ವಸ್ತುಗಳಲ್ಲಿ ತಪ್ಪದೆ ಖರೀದಿಸುವುದು ಸಾಮಾನ್ಯ. ಹಾಗಾಗಿ, ಹಬ್ಬದ ದಿನವಾದ ಗುರುವಾರ ಈ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಕಂಡುಬಂದಿತು.ಪೂಜೆಗೆ ಬೇಕಾದ ಸಣ್ಣ ಬೂದುಗುಂಬಳ ₹ 50ರಿಂದ ಹಿಡಿದು ಅವುಗಳ ಗಾತ್ರಕ್ಕೆ ತಕ್ಕಂತೆ ₹ 300ರ ವರೆಗೂ ದರ ನಿಗದಿಗೊಳಿಸಲಾಗಿದೆ. ಹೂವಿನ ಬೆಲೆಯಂತೂ ಹೇಳತೀರದಾಗಿದೆ. ಸೇವಂತಿಗೆ ಕೆಜಿಗೆ ₹ 450, ಕೆಜಿ ಕನಕಾಂಬರಕ್ಕೆ ₹ 900ರಿಂದ ₹1 200, ಕೆಜಿ ಮಲ್ಲಿಗೆಗೆ ₹ 600, ಕೆಜಿ ಚೆಂಡು ಹೂವಿಗೆ ₹ 100ರಿಂದ ₹ 250, ಹೂವಿನ ಹಾರವೊಂದಕ್ಕೆ ₹ 100 ರಿಂದ1000, ಇನ್ನು ₹10ಕ್ಕೆ ಮೂರು ನಿಂಬೆಹಣ್ಣು ಸಿಗುತ್ತಿವೆ.

ವಾಹನಗಳಿಗೆ ದೃಷ್ಟಿಗೆ ಹಾಕುವ ದಾರದಲ್ಲಿ ಸೇರಿಸಿರುವ ನಾಲ್ಕೈದು ಮೆಣಸಿನಕಾಯಿ, ಒಂದು ನಿಂಬೆಹಣ್ಣಿನ ಗುಚ್ಚಕ್ಕೆ ₹ 10ರಿಂದ ಹಿಡಿದು ₹ 25ಕ್ಕೆ ಮಾರಾಟವಾಗುತ್ತಿದೆ. ಒಂದು ಜತೆ ಬಾಳೆಕಂಬಕ್ಕೆ ₹ 30ರಿಂದ 35ರಿಂದ ₹ 300, ಒಂದು ತೆಂಗಿನಕಾಯಿಗೆ ₹ 25ರಿಂದ 35, ಒಂದು ಹಿಡಿ ಮಾವಿನ ಸೊಪ್ಪಿಗೆ ₹20ರಿಂದ 30ಕ್ಕೆ, ಪೂಜೆಗೆ ಬೇಕಾದ 5 ಜತೆ ಹಣ್ಣಿಗೆ ₹150ರಿಂದ ₹300ರ ವರೆಗೆ ದರ ನಿಗದಿ ಮಾಡಲಾಗಿದೆ. ಇದಲ್ಲದೆ ತರಕಾರಿ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿರುವುದು ಕಂಡುಬಂದಿತು.

ಎಲ್ಲೆಲ್ಲಿ ಮಾರಾಟ:

ನಗರದ ಜನನಿಬಿಡ ಪ್ರದೇಶವಾಗಿರುವ ದುರ್ಗದ ಬೈಲ್‌, ಶಾಹ ಬಜಾರ್, ಜನತಾ ಬಜಾರ, ರಾಣಿ ಚೆನ್ನಮ್ಮ ವೃತ್ತ, ಸರ್ವೋದಯ ವೃತ್ತ, ಉಣಕಲ್ಲ ಕ್ರಾಸ್‌, ಹಳೇ ಹುಬ್ಬಳ್ಳಿ, ಇಂಡಿ ಪಂಪ್‌ ಬಳಿ, ಕಮರಿಪೇಟೆ, ಗೋಪನಕೊಪ್ಪ ಸೇರಿದಂತೆ ಪ್ರಮುಖ ವೃತ್ತಗಳು, ಮಾರುಕಟ್ಟೆ ಪ್ರದೇಶಗಳಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಭರ್ಜರಿಯಾಗಿ ನಡೆಯಿತು.

ಕಳೆಗಟ್ಟಿದ ಮಾರುಕಟ್ಟೆ:

ಮಾರುಕಟ್ಟೆಯಲ್ಲಿ ಗಿಜಿಗುಡುವ ಜನಸಂದಣಿಯಿಂದ ಕಾಲಿಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಸ್ತುಗಳ ಬೆಲೆ ಗಗನಮುಖಿಯಾಗಿದ್ದರೂ ಗ್ರಾಹಕರು ಮಾತ್ರ ಮುಗಿಬಿದ್ದು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಮನೆಯಲ್ಲಿರುವ ವಾಹನ ಹಾಗೂ ಇತರ ಆಯುಧಗಳನ್ನು ತೊಳೆದು ಪೂಜೆಗೆ ಸಿದ್ಧಪಡಿಸಿಕೊಳ್ಳುವ ಕಾರ್ಯವೂ ಭರದಿಂದ ಸಾಗಿತ್ತು. ಅಲ್ಲಲ್ಲಿ ಬಾಳೆ ಕಂದು, ಮಾವಿನ ಸೊಪ್ಪು ಹಾಗೂ ಇತರ ವಸ್ತುಗಳ ಮಾರಾಟ ಜೋರಾಗಿ ಹಬ್ಬದ ಮುನ್ನ ದಿನವೆ ಹಬ್ಬದ ಕಳೆಗಟ್ಟುತ್ತಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ