ದೇಗುಲದ ಅಭಿವೃದ್ಧಿಗೆ ಮುಜರಾಯಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌

KannadaprabhaNewsNetwork | Published : Nov 1, 2024 12:00 AM

ಸಾರಾಂಶ

ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಬಳಿಕ ಊರಿನ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆ ನೀಡಿದರು. ಗುಂಡ್ಲುಪೇಟೆಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಗುದ್ದಲಿಪೂಜೆ । ಹೊರೆಯಾಲದಲ್ಲಿ ₹40 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಬಳಿಕ ಊರಿನ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆ ನೀಡಿದರು.

ತಾಲೂಕಿನ ಹೊರೆಯಾಲ ಗ್ರಾಮದಲ್ಲಿ ೪೦ ಲಕ್ಷ ರು. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಗ್ರಾಮಸ್ಥರ ಮನವಿ ಆಲಿಸಿ ಬಳಿಕ ಮಾತನಾಡಿದರು.

ಶಾಸಕರು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೪೦ ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಗ್ರಾಮದ ಬಸವೇಶ್ವರ, ಮಾರಿಗುಡಿ, ಕಾಳಿಕಾಂಬ ದೇವಸ್ಥಾನಗಳಿಗೆ ಅನುದಾನ ಕೋರಲಾಗಿದೆ. ಅನುದಾನ ಬಂದ ಬಳಿಕ ಎಲ್ಲ ದೇವಸ್ಥಾನಗಳಿಗೆ ಅನುದಾನ ನೀಡಲಾಗುವುದು ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ನೀಲಕಂಠಪ್ಪ ಮಾತನಾಡಿ, ಗ್ರಾಮದ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.

ಅದ್ಧೂರಿ ಸ್ವಾಗತ:

ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ಆಗಮಿಸಿದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರನ್ನು ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾದ್ಯ ಹಾಗೂ ಇತರ ವಾದ್ಯಗಳೊಂದಿಗೆ ಗುದ್ದಲಿಪೂಜೆ ಸ್ಥಳಕ್ಕೆ ಕರೆದು ತಂದರು.

ಮಹದೇವಪ್ರಸಾದ್‌ ರೀತಿ ನೀವು ನಡೆಯಿರಿ

ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ಬಳಿಕ ತಾಪಂ ಮಾಜಿ ಸದಸ್ಯ ನೀಲಕಂಠಪ್ಪ ಮಾತನಾಡಿ, ಮಹದೇವಪ್ರಸಾದ್‌ ರೀತಿಯಲ್ಲಿ ನಡೆಯಿರಿ. ಆಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ಸಲಹೆ ನೀಡಿದರು.

ಹೊರೆಯಾಲ ಮಹದೇವ ಪ್ರಸಾದ್‌ರಿಗೆ ತವರು ಮನೆ ಇದ್ದ ಹಾಗೆ. ನೀವು ಸಹ ಮಹದೇವ ಪ್ರಸಾದ್‌ರ ರೀತಿ ನಡೆದರೆ ಮುಂದಿನ ೨೫ ವರ್ಷ ಅಧಿಕಾರದಲ್ಲಿ ಇರುತ್ತೀರಿ ಎಂದು ಹೇಳಿದರು.

ಗ್ರಾಮದ ಸಮಸ್ಯೆಗಳನ್ನು ಪಕ್ಷಾತೀತವಾಗಿ ನಿಮ್ಮ ಗಮನಕ್ಕೆ ತಂದಿದ್ದೇನೆ. ನೀವು ಗ್ರಾಮದ ಕೆಲಸಗಳನ್ನು ಮಾಡುವ ಕೆಲಸ ಮಾಡಿ ಸಾಕು ಎಂದರು.

ಗುದ್ದಲಿಪೂಜೆ ಸಮಾರಂಭದಲ್ಲಿ ಹೊರೆಯಾಲ ಗ್ರಾಪಂ ಅಧ್ಯಕ್ಷೆ ಲೀಲಾವತಿ ಉಮೇಶ್‌, ಉಪಾಧ್ಯಕ್ಷೆ ಚೆನ್ನಾಂಬಿಕ ಇಂದಿರನಾಯಕ, ಜಿಪಂ ಮಾಜಿ ಸದಸ್ಯ ಕೆ.ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ಟಿಎಪಿಸಿಎಂಎಸ್‌ ನಿರ್ದೇಶಕ ಮೀಸೆ ಬಸಪ್ಪ, ಗೌಡಿಕೆ ಗುರುಸ್ವಾಮಿ, ಬೆಳ್ಳಪ್ಪ, ಗ್ರಾಪಂ ಸದಸ್ಯರಾದ ಎಚ್.ಸಿ.ಮಹೇಶ್‌, ಅಂಕೇಶ್‌, ಮುಖಂಡರಾದ ಭೋಗಪ್ಪ, ಆರ್.ಬಿ.ಸುರೇಶ್‌, ಚಂದ್ರ ಆಚಾರ್‌, ಮುದ್ದಪ್ಪ, ಶರತ್‌ ಕುಮಾರ್‌ ಡಿ., ಮಹದೇವನಾಯಕ ಸೇರಿದಂತೆ ಗ್ರಾಮಸ್ಥರು ಇದ್ದರು.

Share this article