ಕನ್ನಡಪ್ರಭ ವಾರ್ತೆ ಟಿ. ನರಸೀಪುರಪಟ್ಟಣವನ್ನು ಸುಂದರ, ಸುಸಜ್ಜಿತ ಹಾಗೂ ಆಧುನಿಕ ಮಾದರಿಯ ಪಟ್ಟಣವನ್ನಾಗಿ ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಜೂರು ಮಾಡಿರುವ 1.85 ಕೋಟಿ ರು. ಗಳ ವೆಚ್ಚದ ಸೌಂದರ್ಯೀಕರಣ ಯೋಜನೆಗೆ ಚುರುಕು ದೊರೆತಿದೆ.ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳ ಕುರಿತು ಸಮಾಲೋಚನೆ ನಡೆಸಿದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಎಂಜಿನಿಯರ್ ಸಾಯಿಶಂಕರ್, ನಿರ್ಮಿತಿ ಕೇಂದ್ರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಮಂಜುನಾಥ್ ಹಾಗೂ ಎಇಇ ಅಭಿಷೇಕ್ ಅವರು ಲಿಂಕ್ ರಸ್ತೆಯಿಂದ ವಿದ್ಯೋದಯ ಕಾಲೇಜು ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ರಸ್ತೆ ಸೇರಿದಂತೆ ಅಭಿವೃದ್ಧಿಪಡಿಸಬೇಕಿರುವ ಪ್ರಮುಖ ರಸ್ತೆ ಹಾಗೂ ಫುಟ್ಪಾತ್ ಪ್ರದೇಶಗಳನ್ನು ಪರಿಶೀಲಿಸಿದರು. ಕಾಮಗಾರಿಗಳ ಅನುಷ್ಠಾನದಲ್ಲಿ ಗುಣಮಟ್ಟ ಹಾಗೂ ಯೋಜನಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಅಧಿಕಾರಿಗಳ ನಡುವೆ ಚರ್ಚೆ ನಡೆಯಿತು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳ ನಕ್ಷೆ ಪರಿಶೀಲಿಸಿ, ಅನುಷ್ಠಾನದ ವಿವಿಧ ಆಯಾಮಗಳ ಕುರಿತು ಸಮಾಲೋಚನೆ ನಡೆಯಿತು. ಯೋಜನೆಯಡಿ ತಿರುಮಕೂಡಲು ವೃತ್ತದಿಂದ ವಿದ್ಯೋದಯ ಕಾಲೇಜು ವೃತ್ತದವರೆಗೆ ಫುಟ್ ಪಾತ್ ಅನ್ನು ಮೇಲ್ದರ್ಜೆಗೇರಿಸಿ ಹೊಸ ಟೈಲ್ಸ್ ಅಳವಡಿಸುವುದು, ರಸ್ತೆ ಮಧ್ಯಭಾಗದಲ್ಲಿ ಡಿವೈಡರ್ ನಿರ್ಮಿಸುವುದು, ಅಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿ ವೇಳೆಯಲ್ಲೂ ಆಕರ್ಷಕ ವಾತಾವರಣ ನಿರ್ಮಿಸುವುದು ಸೇರಿದೆ.ಇದಲ್ಲದೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸುಂದರ ವೃತ್ತ (ರೌಂಡ್ ಅಬೌಟ್) ನಿರ್ಮಿಸಿ ಅದರ ಮಧ್ಯಭಾಗದಲ್ಲಿ ಆಕರ್ಷಕ ಪೌಂಟೇನ್ ಸ್ಥಾಪಿಸಲಾಗುವುದು. ಪಟ್ಟಣದ ಹೆಗ್ಗುರುತಾಗಿರುವ ತ್ರಿವೇಣಿ ಸಂಗಮ ಪ್ರದೇಶದ ಅಭಿವೃದ್ಧಿಗೂ ಯೋಜನೆಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಭಾಗವನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ.ಸ್ಥಳ ಪರಿಶೀಲನೆ ವೇಳೆ ಎಇಇ ಮಂಜುನಾಥ್ ಅವರು ಕಾಮಗಾರಿಗಳ ಕುರಿತು ಎಇಇ ಅಭಿಷೇಕ್ ಅವರಿಗೆ ಅಗತ್ಯ ತಾಂತ್ರಿಕ ಮಾರ್ಗದರ್ಶನ ನೀಡಿ, ಮೊದಲಿಗೆ ಸಂಪೂರ್ಣ ರಸ್ತೆಯ ಉದ್ದ ಹಾಗೂ ಅಭಿವೃದ್ಧಿಪಡಿಸಬೇಕಾದ ಪ್ರದೇಶಗಳ ನಿಖರ ಮಾಹಿತಿಯನ್ನು ಸಂಗ್ರಹಿಸಿ, ಪ್ರತಿ 30 ಮೀಟರ್ ಅಂತರದಲ್ಲಿ ಮಾರ್ಕಿಂಗ್ ಮಾಡುವಂತೆ ಸೂಚಿಸಿದರು. ಇದರಿಂದ ಕಾಮಗಾರಿ ನಿಖರವಾಗಿ ಹಾಗೂ ವಿಳಂಬವಿಲ್ಲದೆ ಅನುಷ್ಠಾನಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.ಯೋಜನೆಗೆ ಸರ್ಕಾರ ಒಟ್ಟು 1.85 ಕೋಟಿ ರು.ಗಳ ಅನುದಾನ ಮಂಜೂರು ಮಾಡಿದ್ದು, ಅದರಲ್ಲಿ ಶೇ. 40ರಷ್ಟು ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನು ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂದಿನ ಒಂದು ವಾರದೊಳಗೆ ಕಾಮಗಾರಿಗಳ ಅಂತಿಮ ವಿನ್ಯಾಸ ಹಾಗೂ ಕಾರ್ಯಯೋಜನೆ ಸಿದ್ಧಗೊಳ್ಳಲಿದ್ದು, ಬಳಿಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕೃತ ಚಾಲನೆ ನೀಡಲಾಗುವುದು. ಈ ಯೋಜನೆ ಪೂರ್ಣಗೊಂಡ ಬಳಿಕ ತಿ.ನರಸೀಪುರ ಪಟ್ಟಣದ ಪ್ರಮುಖ ರಸ್ತೆಗಳು, ಫುಟ್ಪಾತ್ಗಳು ಹಾಗೂ ಸಾರ್ವಜನಿಕ ಸ್ಥಳಗಳು ಹೊಸ ರೂಪ ಪಡೆದು, ಪಟ್ಟಣದ ಸೌಂದರ್ಯ ಹೆಚ್ಚುವುದರ ಜೊತೆಗೆ ಸಾರ್ವಜನಿಕರ ಸಂಚಾರಕ್ಕೂ ಅನುಕೂಲವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.ಈ ವೇಳೆ ಕೆಡಿಪಿ ಸದಸ್ಯ ಎಂ. ದಿವಾಕರ್ ಇದ್ದರು.