ಮುಂಡರಗಿ: 12ನೇ ಶತಮಾನದ ಅನುಭವ ಮಂಟಪವೇ ದೇಶದ ಮೊದಲ ಸಂಸತ್ತು. ಈ ಮಾದರಿಯಲ್ಲಿಯೇ ಇಂದಿನ ದೆಹಲಿ ನೂತನ ಸಂಸತ್ತು ರೂಪಿತವಾಗಿದೆ ಎಂದು ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ಇಂದು ನಾವೆಲ್ಲರು ಪ್ರಜಾರಾಜ್ಯದಲ್ಲಿದ್ದೇವೆ. ನಮ್ಮಲ್ಲಿಯೇ ಒಬ್ಬ ನಾಯಕನಿದ್ದು, ನಾವೆಲ್ಲರೂ ಅವನಿಗೆ ನಮ್ಮ ಜವಾಬ್ದಾರಿ ನೀಡಿರುತ್ತೇವೆ. ದೇಶದ ಸಂವಿಧಾನದಲ್ಲಿ ಮೂಲಭೂತ ಹಕ್ಕು ಕೊಟ್ಟಿದ್ದು, ಅದು ನಮ್ಮ ರಕ್ಷಣೆಗೆ ಪೂರಕವಾಗಿದೆ. ನಮ್ಮದು ಜಾತ್ಯತೀತ ರಾಷ್ಟ್ರವಾಗಿದೆ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಜೀವನದಲ್ಲಿ ಆದರ್ಶ ಗುಣ ಬೆಳೆಸಿಕೊಂಡು ರಾಷ್ಟ್ರಮಟ್ಟದ ನಾಯಕರಾಗಬೇಕು. ವಿದ್ಯಾರ್ಥಿಗಳು ತಮಗೆ ನೀಡಿದ ಖಾತೆಗಳನ್ನು ಸರಿಯಾಗಿ ನಿಭಾಯಿಸುವ ಮೂಲಕ ಎಲ್ಲ ಚಟುವಟಿಕೆಗಳು ಸರಳವಾಗಿ ಜರುಗುವಂತೆ ಮಾಡಬೇಕು ಎಂದರು.ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷ ನಿಖಿಲ ಉಳ್ಳಾಗಡ್ಡಿ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿ, ದೇಶ,ಭಾಷೆ, ನೆಲ,ಜಲ, ಗುರು-ಹಿರಿಯರಿಗೆ ವಿಧೇಯನಾಗಿರುತ್ತೇನೆ. ನನ್ನ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇನೆಂದು, ಕಾಯಾ, ವಾಚಾ, ಮನಸಾ ಬದ್ದನಾಗಿರುತ್ತೇನೆಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾರಾಯಣಪ್ಪ ಇಲ್ಲೂರ, ಕೋಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ಈಶ್ವರಪ್ಪ ಬೆಟಗೇರಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಶಾಲಾ ಪ್ರಾಚಾರ್ಯ ಶರಣಕುಮಾರ ಬುಗಟಿ ಆಯ್ಕೆ ಆದ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪೂರ್ವಿ ಕೆ ನಿರೂಪಿಸಿದರು. ಸನಾ ಸವಣೂರ ವಂದಿಸಿದರು.