ಅಕ್ಷರ ಜ್ಞಾನಕ್ಕಿಂತ ಅನುಭವವೇ ದೊಡ್ಡ ಸಂಪತ್ತು: ಸಿದ್ದಗಂಗಾಶ್ರೀ

KannadaprabhaNewsNetwork | Published : Jan 4, 2025 12:33 AM

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಿಸಲಾಗಿದ್ದ ಮಾನಸೋತ್ಸವ ಮೂರು ದಿನಗಳ ಕಾರ್ಯಕ್ರಮದಲ್ಲಿ ಮಾನಸ ಪ್ರಶಸ್ತಿಯನ್ನು ಖ್ಯಾತ ನಿರ್ದೇಶಕ ಶೇಷಾದ್ರಿ ಅವರು ಟಿ.ಎನ್.ಸೀತಾರಾಂ ಅವರಿಗೆ ಪ್ರದಾನ ಮಾಡಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ಸಿದ್ದಗಂಗಾಶ್ರೀಗಳು, ಖ್ಯಾತ ವಿಜ್ಞಾನಿ ಕಿರಣ್ ಕುಮಾರ್ ಡಾ.ಶಿವರಾಜಪ್ಪ, ಡಾ.ದತ್ತೇಶ್ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿದ್ಯಾರ್ಥಿಗಳು ಆಸೆಗಳಿಗಾಗಿ ಬದುಕಬಾರದು ಆದರ್ಶಗಳಿಗಾಗಿ ಬದುಕಬೇಕು, ಜೀವನದಲ್ಲಿ ಶಿಸ್ತು, ಶ್ರದ್ಧೆ ಎಂಬುದು ಅತೀ ಮುಖ್ಯವಾದುದು ಎಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ನುಡಿದರು.ಮಾನಸೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಮಾನಸ ಪ್ರಶಸ್ತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ಹೆಚ್ಚಾಗಬೇಕು. ಅಕ್ಷರ ಜ್ಞಾನಕ್ಕಿಂತ ಅನುಭವದ ಜ್ಞಾನ ಮುಖ್ಯ. ವಿದ್ವತ್ತಿನ ಶಿಕ್ಷಣಕ್ಕಿಂತ ವಿವೇಕದ ಶಿಕ್ಷಣ ಮುಖ್ಯ. ಶಾರೀರಿಕ ಮಾನಸಿಕ, ಸದೃಢತೆ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಪರಿಪೂರ್ಣ ಶಿಕ್ಷಣವನ್ನು ಎಲ್ಲರೂ ಪಡೆಯುವಂತಾಗಬೇಕು. ಮೊಬೈಲ್ ದುಷ್ಪರಿಣಾಮಗಳು ಹೆಚ್ಚಾಗಿದ್ದು ವಿದ್ಯಾರ್ಥಿಗಳು ಅದರಿಂದ ದೂರವಿರಬೇಕು ಸೃಜನಶೀಲತೆಯಿಂದ ಕ್ರಿಯಾಶೀಲತೆಯಿಂದ ಗುರಿ ಸಾಧನೆ ಸಾಧ್ಯವಾಗುತ್ತದೆ. ಶಿಸ್ತು ಶ್ರದ್ಧೆ ಉತ್ತಮ ಶಿಕ್ಷಣವನ್ನು ನೀಡುತ್ತಿರುವ ಮಾನಸ ಶಿಕ್ಷಣ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದರು.

ಭಾರತವನ್ನು ವಿಶ್ವ ಗುರು ಸ್ಥಾನಕ್ಕೆ ತನ್ನಿ:ಖ್ಯಾತ ವಿಜ್ಞಾನಿ ಪದ್ಮಶ್ರೀ ಎ.ಎಸ್.ಕಿರಣ್ ಕುಮಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಎಲ್ಲರು ನಮ್ಮ ದೇಶದತ್ತ ನೋಡುವಂತಾಗಿದೆ. ದೇಶವು ಎಲ್ಲ ಕ್ಷೇತ್ರಗಳಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದರಿಂದ ದೇಶದ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಮಾನವನಿಗೆ ಬೀಳುವ ಕನಸು ಕೂಡ ಆಡಿಯೋ ವಿಡಿಯೊ ಥರ ಮನಷ್ಯನಲ್ಲಿ ಕೆಲಸ ಮಾಡಲಿದೆ ಎಂದರು.ಹಿರಿತೆರೆಗೆ ರಾಜಕುಮಾರ್, ಕಿರುತೆರೆಗೆ ಟಿಎನ್ಎಸ್‌: ಪಿ.ಶೇಷಾದ್ರಿ ಮಾನಸ ಪ್ರಶಸ್ತಿ ಪ್ರದಾನ ಮಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಕನ್ನಡ ಭಾಷೆಗೆ, ಕನ್ನಡ ಚಲನಚಿತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿದ ವರನಟ ಡಾ.ರಾಜ್ ಕುಮಾರ್ ಅವರು ಚಾ.ನಗರ ಜಿಲ್ಲೆಯವರು, ಅವರು ಚಲನಚಿತ್ರ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಅದೇ ರೀತಿಯಲ್ಲಿ ಟಿ.ಎನ್.ಸೀತಾರಾಂ ಕಿರುತೆರೆ ಕ್ಷೇತ್ರದಲ್ಲಿನ ಅವರ ಸಾಧನೆ ಅಪ್ರತಿಮ ಬಣ್ಣಿಸಲಾಗದ್ದು ಎಂದರು. 2010ರ ಬಳಿಕ ಧಾರಾವಾಹಿ, ಸಿನಿಮಾ ಕ್ಷೇತ್ರ ನಮ್ಮ ಭಾಷೆ, ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದೆ. ಸಿದ್ದಗಂಗಾ ಕ್ಷೇತ್ರ ದಾಸೋಹ ಮತ್ತು ವಿದ್ಯೆ ನೀಡುವಂತಹ ಮಹತ್ವದ ಕೆಲಸ ಮಾಡುತ್ತಿದೆ, ಅದೊಂದು ದೊಡ್ಡ ಸಂಸ್ಥಾನವಾಗಿದೆ ಎಂದು ವ್ಯಾಖ್ಯಾನಿಸಿದರು. ನಾನು 10ನೇ ತರಗತಿಯಲ್ಲಿ ಫೇಲಾಗಿದ್ದೆ, ಅನುತ್ತೀರ್ಣರಾದವರು ಬೇಸರ ಪಟ್ಟುಕೊಳ್ಳದಿರಿ, ಮನುಷ್ಯರ ಬುದ್ದಿಯನ್ನು ಅಂಕಗಳು ಅಳೆಯಲ್ಲ, ದಡ್ಡರಾದವರೂ ಸಹಾ ಉನ್ನತಸಾಧನೆ ಮಾಡಬಹುದು ಎಂಬುದಕ್ಕೆ ವೇದಿಕೆಯಲ್ಲಿನ ಗಣ್ಯರೇ ಸಾಕ್ಷಿಯಾಗಿದ್ದಾರೆ. ಕೊಳ್ಳೇಗಾಲದ ಜನ ಹೃದಯವಂತರು ಎಂಬುದು ಇಂದಿನ ಕಾರ್ಯಕ್ರಮ ರೂಪಿಸಿದೆ. ಮಾನಸ ಸಂಸ್ಥೆ ವಿದ್ಯಾದಾನದಂತಹ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಗಮನಸೆಳೆದಿದೆ, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಒಂದಲ್ಲ ಒಂದು ರೀತಿ ಅಪ್ರತಿಮ ಪ್ರತಿಭೆ, ಉತ್ತಮ ಜ್ಞಾನ. ಶಕ್ತಿಯುಳ್ಳವರಾಗಿದ್ದು ಅವರನ್ನು ಗುರುತಿಸುವ ಕೆಲಸವನ್ನು ಸಂಸ್ಥೆ ಹೆಚ್ಚಿನ ರೀತಿ ಮಾಡಲಿ ಎಂದರು.

ಮಾನಸದಿಂದ ಮೌಲ್ಯಯುತ ಶಿಕ್ಷಣ:

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಚಲನಚಿತ್ರ ಮತ್ತು ಧಾರಾವಾಹಿ ಕ್ಷೇತ್ರಗಳಲ್ಲಿ ಟಿ.ಎನ್.ಸೀತಾರಾಮ್ ಅವರ ಸಾಧನೆ ಅನನ್ಯ. ಮಾನಸ ಶಿಕ್ಷಣ ಸಂಸ್ಥೆ ಅಗಾಧವಾಗಿ ಬೆಳೆದು ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ, ಸಂಸ್ಥೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಸಂತಸದ ಸಂಗತಿ ಎಂದರು.

ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಪ್ರೊ.ಡಾ.ಶಿವರಾಜಪ್ಪ, ಗುಂಡೇಗಾಲ ಮಠಾಧ್ಯಕ್ಷ ಕಾಂತಬುದ್ದಿ, ಸಂಸ್ಥೆ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ರೂಪದತ್ತೇಶ್, ಮುಖ್ಯಶಿಕ್ಷಕ ಶಂಕರ್, ಡಾ.ಚನ್ನಶೆಟ್ಟಿ ಡಾ.ನಾಗಭೂಷಣ್, ಕೃಷ್ಣೆಗೌಡ, ಹನೂರು ವೆಂಕಟೇಗೌಡ, ಬಾಲಕೖಷ್ಣೆಗೌಡ, ನಗರಸಭೆ ಸದಸ್ಯ ಜಿ.ಎಂ ಸುರೇಶ್, ನಾಸೀರ್ ಪಾಶಾ ಇನ್ನಿತರರಿದ್ದರು.

ನಾನು ರೈತ, ರೇಷ್ಮೆಗೂಡು ಮಾರಾಟಕ್ಕೆ ಕೊಳ್ಳೇಗಾಲಕ್ಕೆ ಬರುತ್ತಿದ್ದೆ: ಟಿಎನ್‌ಎಸ್‌

ಮಾನಸ ಪ್ರಶಸ್ತಿ ಸ್ವೀಕರಿಸುವ ನೇಳೆ ನನಗೆ ಸಂಕೋಚ, ನಾಚಿಕೆ ಆಯಿತು, ಮೂಕವಿಸ್ಮಿತನಾದೆ ಕೊಳ್ಳೇಗಾಲ: ನಾನೊಬ್ಬ ರೈತ ಅಂದು ರೇಷ್ಮೆ ನಗರಿ ಎಂಬ ಖ್ಯಾತವೆತ್ತ ಕೊಳ್ಳೇಗಾಲಕ್ಕೆ ರೇಷ್ಮೆ ಮಾರಾಟಕ್ಕೆ ಬರುತ್ತಿದ್ದೆ, ಇಲ್ಲಿನ ಜನರದ್ದು ಅಪರೂಪದ ವ್ಯಕ್ತಿತ್ವ, ಇಂದಿನ ಸಮಾರಂಭದಲ್ಲಿ ಪ್ರಶಸ್ತಿ ಪಡೆದಿದ್ದು ನನ್ನ ಮದುವೆ ದಿನ ನೆನೆಪಿಸುತ್ತೆ. ಪ್ರಶಸ್ತಿ ಸ್ವೀಕರಿಸಿದ ವೇಳೆ ನಾನು ಪ್ರಶಸ್ತಿಗೆ ಅರ್ಹನೆ ಎಂಬ ಪ್ರಶ್ನೆ ಮೂಡಿತು, ಇಲ್ಲಿನ ವಿದ್ಯಾರ್ಥಿಗಳು, ಸತ್ ಪ್ರಜೆಗಳನ್ನು ಕಂಡು ಪ್ರಶಸ್ತಿ ಸ್ವೀಕರಿಸಿದ್ದು ಸಾರ್ಥಕ ಎನಿಸಿತು ಎಂದು ಖ್ಯಾತ ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಹೇಳಿದರು.

ಮಾನಸೋತ್ಸವ ಕಾರ್ಯಕ್ರಮದಲ್ಲಿ ಮಾನಸ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಗೌರಿ ಬಿದನೂರಿನ ನಾನು ಒಬ್ಬ ರೈತ, ಅಂದು ಕೊಳ್ಳೇಗಾಲಕ್ಕೆ ರೇಷ್ಮೆ ಮಾರಾಟಕ್ಕಾಗಿ ರೇಷ್ಮೆ ಮೊಟ್ಟೆ ತರುತ್ತಿದ್ದು ಇತಿಹಾಸ. ಇಂದು ಇಲ್ಲಿಯೇ ಮಾನಸ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ನಾಚಿಕೆ, ಸಂಕೋಚದ ಜೊತೆ ಸಂತಸ ಹಾಗೂ ಹೆಮ್ಮೆ, ಸಾರ್ಥಕತೆ ಎನಿಸಿದೆ. ಪ್ರಶಸ್ತಿ ಸ್ವೀಕರಿಸುವ ವೇಳೆ ನಾನು ಮೂಕವಿಸ್ಮಿತನಾದೆ ಎಂದರು. ಹಲವಾರು ಮಂದಿಗೆ ದಾರಿದೀಪ ತೋರಿದ ಹೆಗ್ಗಳಿಕೆ ಸಿದ್ದಗಂಗಾ ಮಠದ್ದು, ನಾನೊಬ್ಬ ಹುಡುಗನನ್ನು ಸಿದ್ದಗಂಗಾ ಮಠದಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ ಅಲ್ಲಿ ಸೇರಿಸಿಕೊಳ್ಳಿ ಎಂದಿದ್ದೆ, ಮುಂದೊಂದು ದಿನ ಅದೇ ಹುಡುಗ ಸೂಟು-ಬೂಟು ಹಾಕಿಕೊಂಡು ನನ್ನ ಮುಂದೆ ಬಂದಾಗ ಏನು ಮಾಡುತ್ತಿದ್ದೀರಿ ಎಂದು ಕೇಳಿದೆ. ಆತ ನೀವು ಹೇಳಿದಂತೆ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದೆ. ಅದರ ಪರಿಣಾಮ ಇಂದು ಎಸಿಪಿಯಾಗಿರುವೆ ಎಂದ, ಇಂತಹ ಕ್ಷಣಗಳು ಹೆಮ್ಮೆ ಎನಿಸುತ್ತೆ. ನಿರ್ಗತಿಕ ಹುಡುಗನನ್ನು ಪೊಲೀಸ್ ಅಧಿಕಾರಿಯಾಗಿಸಿದ್ದು ಈ ಮಠದ ಸಾಧನೆ ಎಂದರು.

ಇಸ್ರೊ ಸಂಸ್ಥೆ ಪ್ರತಿ ಭಾರತೀಯರೂ ಹೆಮ್ಮೆಪಡುವ ವಿಚಾರ. ಅಂತಾರಾಷ್ಟೀಯ ಮಟ್ಟದಲ್ಲಿ ನಮ್ಮ ಕನ್ನಡಿಗರ ಸಾಧನೆ ಅನನ್ಯ. ನನ್ನ ತಂದೆ ವಿಜ್ಞಾನಿಯಾಗು ಎಂದಿದ್ದರು, ಆದರೆ ನಾನು ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ್ದೆ, ಇದ್ದಕ್ಕಿದ್ದಂತೆ 99 ಅಂಕ ಬಂತು ನಮ್ಮ ಊರಲ್ಲಿ ಎಲ್ಲರಿಗೂ ಅಚ್ಚರಿ, ಸೀತಾರಾಂ 99 ಅಂಕಗಳಿಸಿದ್ದಾನಂತೆ, ಅವರ ಜೊತೆ ಸೇರಿ ಎಂದು ಊರಿನ ಜನ ತಮ್ಮ ಮಕ್ಕಳಿಗೆ ಹೇಳುತ್ತಿದ್ದರು, ಇದಕ್ಕೂ ಮುನ್ನ ನನ್ನ ಜೊತೆ ಸೇರಬೇಡ ಎನ್ನುತ್ತಿದ್ದರು, ಬಳಿಕ ಒಂದು ದಿನ ನನ್ನ ಸಂಸ್ಕೃತ ಶಿಕ್ಷಕರು ನೀನು 99 ಅಂಕಗಳಿಸಿದ್ದಿಯಾ ಎಂದು ಪ್ರಶ್ನಿಸಿದರು, ಹೌದು ಎಲ್ಲ ವಿಷಯಗಳು ಸೇರಿ 99 ಅಂಕ ಬಂತು ಎಂದೆ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಅಂದು ಗಣ್ಯರು ನಟಿ ತಾರಾ, ನಟ ಅವಿನಾಶ್ ಅವರನ್ನೆ ಕರೆಯುತ್ತಿದ್ದರು, ಅವರ ಜೊತೆಗಿದ್ದ ನನಗೆ ಇದರಿಂದ ಹೊಟ್ಟೆಕಿಚ್ಚು ಇತ್ತು, ಇಂದು ನಿಮ್ಮೆಲ್ಲರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿ ಭಾವುಕನಾದೆ, ಕೊಳ್ಳೇಗಾಲದ ಜನತೆ ಅಪರೂಪದ ಜನತೆ, ಅವರಿಗಿರುವ ಶ್ರದ್ಧೆ, ಬದುಕಿನ ಬಗೆಗಿರುವ ಕಾಳಜಿ ಅನನ್ಯವಾದುದು, ಖ್ಯಾತ ನಿರ್ದೇಶಕ ಶೇಷಾದ್ರಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಸಾರ್ತಕತೆ ಎನಿಸಿತು ಎಂದರು.

ಸಂವಿಧಾನದ ಮೂಲ ಆಶಯ ಎಲ್ಲರೂ ಸಮಾನರು ಎಂಬುದಾಗಿದೆ. ಅದು ಕತ್ತಲಿನಲ್ಲಿಟ್ಟ ಬೆಳಕಿನ ದೀಪದಂತೆ ಎಂದು ವ್ಯಾಖ್ಯಾನಿಸಿದರು. ಧಾರಾವಾಹಿಗಳ ವೀಕ್ಷಣೆಯಿಂದ ಸಮಯ ವ್ಯರ್ಥ ಎಂಬ ಭಾವನೆ ಅಂದಿತ್ತು, ಆದರೆ ಇಂದಿನ ದಾರಾವಾಹಿಗಳು ಅದನ್ನು ದೂರಮಾಡಿವೆ ಎಂದರು.

Share this article