ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂದಲೆ ನಡೆಸಿ ಅಪಾರ ಪ್ರಮಾಣದ ಅಡಕೆ ಹಾಗೂ ಕಾಫಿ ಬಾಳೆ ಫಸಲು ಧ್ವಂಸಗೊಳಿಸಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ್ಳದಲ್ಲಿ ನಡೆದಿದೆ.ಬಾಡಗ ಬಾಣಂಗಾಲ ಗ್ರಾಮದ ಕಾಫಿ ಬೆಳೆಗಾರರಾದ ಎಂ.ಸಿ. ಮುತ್ತಣ್ಣ ಎಂಬವರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂದಲೆ ನಡೆಸಿ ಫಸಲಿರುವ 50ಕ್ಕೂ ಅಧಿಕ ಕಾಫಿ ಗಿಡಗಳು ಹಾಗೂ 40ಕ್ಕೂ ಅಧಿಕ ಫಸಲಿರುವ ಅಡಕೆ ಮರಗಳನ್ನು ಮತ್ತು ಫಸಲಿರುವ ಬಾಳೆ ಗಿಡಗಳನ್ನು ಧ್ವಂಸಗೊಳಿಸಿ ತಿಂದು ನಾಶಗೊಳಿಸಿದೆ.
ಕಾಡಾನೆಗಳು ಕಾಫಿ ತೋಟದೊಳಗೆ ಲಗ್ಗೆ ಇಡದಂತೆ ತೋಟಗಳ ಸುತ್ತಲೂ ಅಳವಡಿಸಿದ್ದ ಸೋಲಾರ್ ಬೇಲಿ ಯ ಮೇಲೆ ಮರಗಳನ್ನು ಬೀಳಿಸಿ ಕಾಡಾನೆಗಳು ಸೋಲಾರ್ ಬೇಲಿಯನ್ನು ಹಾನಿಗೊಳಿಸಿವೆ.ಕಾಡಾನೆಗಳ ಉಪಟಳದಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು ಲಕ್ಷಾಂತರ ರುಪಾಯಿ ನಷ್ಟ ಆಗಿದೆ ಎಂದು ತೋಟದ ಮಾಲೀಕ ಎಂ.ಸಿ. ಮುತ್ತಣ್ಣ ತಿಳಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯಿದ್ದು ಮರಿಯಾನೆಗಳು ಸೇರಿದಂತೆ ಕಾಡಾನೆಗಳ ಉಪಟಳದಿಂದಾಗಿ ಕೈಗೆ ಬಂದಂತ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ. ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರಿಗೆ ನೆಮ್ಮದಿ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾರ್ಮಿಕರು ಕೂಡ ಕಾಫಿ ತೋಟದೊಳಗೆ ಕೆಲಸಕ್ಕೆ ತೆರಳಲು ಭಯಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಬೆಳಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ಕಾಫಿ ಕೊಯ್ಲು ಆರಂಭವಾಗಿದ್ದು ಕಾಫಿ ತೋಟದೊಳಗೆ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡುತ್ತಿದೆ. ಕಾಡಾನೆಗಳ ಉಪಟಳದಿಂದ ಬೆಳೆ ನಾಶ ಹೊಂದಿ ನಷ್ಟಕ್ಕೆ ಒಳಗಾದ ಬೆಳಗಾರರಿಗೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.