- ಲೋಕನಾಥಪುರ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾದುದು. ಜೊತೆಗೆ ಮಕ್ಕಳು ಜಾತ್ಯಾತೀತ ಮನೋಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಪಡೆದ ಮಕ್ಕಳು ಸಮಾಜಮುಖಿಯಾಗಿ ಬದುಕಬೇಕು. ವಿದ್ಯಾರ್ಥಿ ಜೀವನದ ಅನುಭವಗಳು ಅವರ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತವೆ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.
ಬೆಂಗಳೂರಿನ ಅಭ್ಯುದಯ ಟ್ರಸ್ಟ್ ಮತ್ತು "ಸುಂದರ ಭಾರತ ಪ್ರತಿಷ್ಠಾನ " ನಿರ್ಮಿಸಿದ "ಸ್ಟೆಮ್ ಲ್ಯಾಬ್ " ಮತ್ತು ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು ಶಾಲೆಯ ಯಾವುದೇ ಕೊರತೆ ಮಕ್ಕಳ ಶೈಕ್ಷಣಿಕ ಜೀವನಕ್ಕೆ, ಕಲಿಕೆಗೆ ಅಡ್ಡಿಯಾಗಬಾರದು. ಈ ಶಾಲೆ ಅಭಿವೃದ್ಧಿ, ಪ್ರತಿವರ್ಷ ಸಾಧಿಸುತ್ತಿರುವ ಸಾಧನೆ ನಿಜಕ್ಕೂ ಸಂತೋಷ ತರುವಂತದ್ದು. ಗ್ರಾಮೀಣ ಭಾಗದ ಈ ಶಾಲೆಯ ಸಾಧನೆ ಉಳಿದೆಲ್ಲ ಶಾಲೆಗಳಿಗೂ ಮಾದರಿ. ಈ ಸಾಧನೆಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ತಿಳಿಸಿದ ಅವರು ಬೆಂಗಳೂರಿನ ಅಭ್ಯುದಯ ಟ್ರಸ್ಟ್ ಮತ್ತು "ಸುಂದರ ಭಾರತ ಪ್ರತಿಷ್ಠಾನ " ಮಕ್ಕಳ ಕಲಿಕೆಗೆ ಅನುಕೂಲವಾಗಲು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಸ್ಟೆಮ್ ಲ್ಯಾಬ್ ಮತ್ತು ವಿಜ್ಞಾನ ಪ್ರಯೋಗಾಲಯ ಕಟ್ಟಿಸಿಕೊಟ್ಟಿದ್ದಾರೆ. ದಾನಿಗಳು ನೀಡಿದ ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಶಾಲೆ ಮುಖ್ಯ ಶಿಕ್ಷಕ ಪದ್ಮನಾಬ್ ಮಾತನಾಡಿ ಶಾಲಾ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.