ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನೂತನವಾಗಿ ಸ್ಥಾಪಿಸಿರುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಐಡಿಯಾ ಲ್ಯಾಬ್ ಮತ್ತು ಕಂಪ್ಯೂಟರ್ ಸೈನ್ಸ್ ಸಂಕೀರ್ಣ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಐಡಿಯಾ ಲ್ಯಾಬ್‌ನಂತಹ ಯೋಜನೆಗಳು ಅಕಾಡೆಮಿ ಮತ್ತು ಉದ್ಯಮದ ನಡುವಿನ ಸಹಕಾರವನ್ನು ಉತ್ತೇಜಿಸಲಿದೆ. ವಿಜ್ಞಾನ ಮತ್ತು ಜ್ಞಾನಕ್ಕೆ ಅವಿನಾಭಾವ ಸಂಬಂಧವಿದೆ. ಉತ್ತಮ ಮಾತು ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಆದ್ಯತೆ ನೀಡುವ ಜ್ಞಾನ ನಮಗೆ ಬೇಕು. ನಾವು ಕಲಿತ ಜ್ಞಾನ ಸಮಾಜಕ್ಕೆ ಅರ್ಪಣೆಯಾಗಬೇಕು ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಾಲ್ಕು ಗೋಡೆಯ ನಡುವಿನ ಕಲಿಕೆಯ ಜೊತೆಗೆ, ವಾಸ್ತವತೆಯ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಐಡಿಯಾ ಲ್ಯಾಬ್ ನಂತಹ ವೇದಿಕೆ ಸಹಕಾರಿ. ಸಕ್ರಿಯ ಭಾಗವಹಿಸುವಿಕೆ ಮೂಲಕ ಹೊಸ ಆಧುನಿಕ ತಂತ್ರಜ್ಞಾನ, ಕೌಶಲ್ಯತೆಗೆ ಯುವ ಸಮೂಹ ತೆರೆದುಕೊಳ್ಳಬಹುದಾಗಿದೆ ಎಂದರು.ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಾದರಿಗಳ ತರಬೇತಿ, ಪರೀಕ್ಷೆ ಮತ್ತು ಕಾರ್ಯಗತಗೊಳಿಸಲು ಬೇಕಾಗುವ ಸಂಪೂರ್ಣ ತಾಂತ್ರಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾಸಂಸ್ಥೆಯ ಪಾತ್ರ ಪ್ರಮುಖವಾಗಿದೆ ಎಂದರು.
ಏನಿದು ಐಡಿಯಾ ಲ್ಯಾಬ್?
ಎಐಸಿಟಿಇ ಸಂಸ್ಥೆಯ ಪ್ರಮುಖ ಯೋಜನೆಯಾದ ಐಡಿಯಾ ಲ್ಯಾಬ್, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ಕ್ಕೆ ಅನುಸಾರವಾಗಿ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಆಧಾರಿತ ಮತ್ತು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುತ್ತದೆ.ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ, 7,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಜೆ.ಎನ್.ಎನ್.ಸಿ.ಇ ಐಡಿಯಾ ಲ್ಯಾಬ್, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ 24×7 ಕಾರ್ಯನಿರ್ವಹಿಸಲಿದೆ. ತ್ರಿಡಿ ಪ್ರಿಂಟರ್‌ಗಳು, ತ್ರಿಡಿ ಸ್ಕ್ಯಾನರ್‌ಗಳು, ರೋಬೋಟಿಕ್ ಪರಿಕರಗಳು, ಮರ, ಪ್ಲಾಸ್ಟಿಕ್, ಅಲ್ಯೂಮಿನಿಯಂ ಮತ್ತು ಫೋಮ್‌ನಂತಹ ವಸ್ತುಗಳನ್ನು ವಿನ್ಯಾಸಗೊಳಿಸುವ ಸಿ.ಎನ್.ಸಿ ರೌಟರ್‌ಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್ ವಿನ್ಯಾಸವನ್ನು ನಿಖರವಾಗಿ ಮುದ್ರಿಸಬಲ್ಲ ಪಿಸಿಬಿ ಮುದ್ರಣ ಯಂತ್ರ ಮತ್ತು ಲೇಸರ್ ಕಟರ್‌ಗಳು, ಡ್ರೋನ್ ಯುನಿಟ್, ಐಓಟಿ ಪರಿಕರಗಳು, ಅಮ್ಯೆಚುರ್ ರೇಡಿಯೋ ಅಪರೇಟರ್ಸ್ ಸೇರಿ ಉದ್ಯಮ ಮಟ್ಟದ ಸುಮಾರು 200 ಕ್ಕೂ ಹೆಚ್ಚು ಆಧುನಿಕ ಉಪಕರಣಗಳು ಹಾಗೂ ಪ್ರಾತ್ಯಕ್ಷಿಕೆ ಸೌಲಭ್ಯಗಳನ್ನು ಹೊಂದಿದೆ. ಇದರಿಂದ ಒಂದೇ ಸೂರಿನಡಿ, ಸ್ಮಾರ್ಟ್ ಉತ್ಪಾದನೆ, ಡಿಜಿಟಲ್ ಎಂಜಿನಿಯರಿಂಗ್, ಎಐ ಚಾಲಿತ ಎಂಜಿನಿಯರಿಂಗ್ ವಿವಿಧ ಕ್ಷೇತ್ರಗಳ ಆವಿಷ್ಕಾರಿ ಯೋಚನೆಗಳು, ಕಾರ್ಯಗತಗೊಳಿಸುವ ಯೋಜನೆಗಳಾಗಿ ರೂಪಗೊಳ್ಳಲಿದೆ.