ರಿಲಯನ್ಸ್‌ ಮಳಿಗೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥ

KannadaprabhaNewsNetwork |  
Published : Aug 02, 2024, 12:50 AM IST
ಶಹಾಪುರ ನಗರದ ರಿಲಯನ್ಸ್ ಮಳಿಗೆಯಲ್ಲಿ ಅವಧಿ ಮೀರಿದ ಪದಾರ್ಥ ಖರೀದಿಸಿದ ಗ್ರಾಹಕರು. | Kannada Prabha

ಸಾರಾಂಶ

ಶಹಾಪುರ ನಗರದ ರಿಲಯನ್ಸ್ ಮಳಿಗೆಯಲ್ಲಿ ಅವಧಿ ಮೀರಿದ ಪದಾರ್ಥ ಖರೀದಿಸಿದ ಗ್ರಾಹಕರು.

ಕನ್ನಡಪ್ರಭ ವಾರ್ತೆ ಶಹಾಪುರ

ಅವಧಿ ಮೀರಿದ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ವಂಚಿಸಿ, ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ದೂರಿ, ನಗರದ ರಿಲಯನ್ಸ್ ಮಳಿಗೆ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್ ಮಹಲ್‌ನಲ್ಲಿ ಖರಿದಿಸಿದ್ದ ಡ್ರೈ ಫ್ರೂಟ್ಸ್ ಪದಾರ್ಥಗಳ ಅವಧಿ ಮುಗಿದು ಒಂದು ತಿಂಗಳ ಮೇಲಾಗಿದೆ. ಈ ಕುರಿತು ಮಹಲ್ ಮುಖ್ಯಸ್ಥರಿಗೆ ವಿಚಾರಿಸಿದರೆ ಬೇಕಿದ್ದರೆ ತೆಗೆದುಕೊಳ್ಳಿ, ಸಾಕಿದ್ದರೆ ಬಿಡಿ, ಅದಕ್ಕೂ ಮೀರಿ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ಕೊಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಸ್ಥಳದಲ್ಲೇ ಜಿಲ್ಲಾ ಆಹಾರ ಗುಣಮಟ್ಟ ಅಧಿಕಾರಿಗಳಿಗೆ ಹಾಗೂ ತಹಸೀಲ್ದಾರ್‌ಗೆ ದೂರವಾಣಿ ಕರೆ ಮೂಲಕ ಮಹಲ್‌ನ ಘಟನೆ ಕುರಿತು ಗ್ರಾಹಕರು ಮಾಹಿತಿ ನೀಡಿದ್ದಾರೆ.

ಖರೀದಿಸಿದ ವಸ್ತುವಿಗೆ ಬಿಲ್ ನೀಡದೆ, ಬದಲಿಗೆ ನೀವು ಅಂಗಡಿಯಲ್ಲಿ ಗಲಾಟೆ ಮಾಡುತ್ತಿದ್ದೀರಿ ಎಂದು ಪೊಲೀಸ್‌ರಿಗೆ ದೂರು ನೀಡಬೇಕಾಗುತ್ತದೆ ಎಂದು ಮಹಲ್‌ ಮುಖ್ಯಸ್ಥರು ಉಲ್ಟಾ ದಬಾಯಿಸಿದರು ಎಂದು ಕೆಲ ಗ್ರಾಹಕರು ಆರೋಪಿದ್ದಾರೆ.

ಗ್ರಾಹಕ ಫಯಾಜ್‌ ಮಾತನಾಡಿ, ಅವದಿ ಮೀರಿದ ಆಹಾರ ಪದಾರ್ಥಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಕಾನೂನು ಪ್ರಕಾರ ಅಪರಾಧ ಎಂದು ತಿಳಿಸಲಾಗಿದೆ, ಈ ಕುರಿತು ಪೊಲೀಸರ ಗಮನಕ್ಕೂ ತರಲಾಗಿದೆ. ಆದರೆ ಈ ಘಟನೆ ಜರುಗಿ ಮೂರು ದಿನಗಳು ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಯಾವುದೆ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಹಕರ ಆಕ್ರೋಶದಿಂದ ತಡಬಡಾಯಿಸಿದ ರಿಲಯನ್ಸ್‌ ಸಿಬ್ಬಂದಿಗಳು ಮಾರಾಟಕ್ಕಿಟ್ಟಿದ್ದ ವಸ್ತುಗಳನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.

ಬಸ್‌ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ, ನೈರ್ಮಲ್ಯದ ಕೊರತೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳನ್ನು ಆಧರಿಸಿ ಸಂಬಂಧಪಟ್ಟ ವಿವಿಧ ಬಗೆಯ ಅಂಗಡಿಗಳ ಮಾಲೀಕರು ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ, ಅಂಥ ಅಂಗಡಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ, ಈ ಆದೇಶಕ್ಕೆ ಕವಡೆ ಕಿಮ್ಮತ್ತಿಲ್ಲ. ಇಂಥ ಮಳಿಗೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು