ಕನ್ನಡಪ್ರಭ ವಾರ್ತೆ ಬೆಳಗಾವಿ
ಗೋಕಾಕ ನಗರದ ಔಷಧ ಸಂಗ್ರಹಾಲಯದಲ್ಲಿ ₹97 ಲಕ್ಷ ಮೌಲ್ಯದ ಅವಧಿ ಮೀರಿದ ಔಷಧಗಳು ಇರುವುದು ಪತ್ತೆಯಾಗಿದೆ. ಈ ಕುರಿತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕಾರ್ಯ ಕೈಗೊಳ್ಳಲಾಗಿದೆ. ವಿವಿಧ ಕಚೇರಿಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ. ಗೋಕಾಕ ನಗರದ ಔಷಧ ಸಂಗ್ರಹ ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಔಷಧಗಳು ಅವಧಿ ಮೀರಿವೆ. ಇದರಿಂದಾಗಿ ಲಕ್ಷಾಂತರ ಮೌಲ್ಯದ ಔಷಧಗಳು ಹಾನಿಗೀಡಾಗಿವೆ. ಇದು ಸಾರ್ವಜನಿಕರ ಹಣ. ಈ ರೀತಿ ಪೋಲಾಗಬಾರದು. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಗೋಕಾಕ ಔಷಧ ಗೋದಾಮಿನಲ್ಲಿ ಐದು ತಾಲೂಕಿಗೆ ಔಷಧಗಳು ಪೂರೈಕೆಯಾಗುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವಧಿ ಮೀರಿದ ಔಷಧ ಖರೀದಿಸಲಾಗಿದೆ. ಔಷಧ ಖರೀದಿ ಮಾಡುವ ವೇಳೆಯೇ ಅವುಗಳ ಅವಧಿ ಅರ್ಧ ಮೀರಿವೆ. ಅವು ಔಷಧ ಉಪಯೋಗವಾಗುವುದಿಲ್ಲ ಎಂದರು.ಬೆಳಗಾವಿ ನಗರದಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ರಮ ವ್ಯವಹಾರ ನಡೆಯುತ್ತಿವೆ. ಬೇರೆ ಯಾರದ್ದೋ ಹೆಸರಿನಲ್ಲಿದ್ದ ಆಸ್ತಿಗಳನ್ನು ಅಕ್ರಮವಾಗಿ ಬೇರೆಯವರೆಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಉಪನೋಂದಣಾಧಿಕಾರಿ ಕೂಡ ಶಾಮೀಲಾಗಿರುವ ಶಂಕೆಯಿದೆ. ಸದ್ಯ ನಮ್ಮ ಗಮನಕ್ಕೆ ಮೂರು ಘಟನೆಗಳು ಬೆಳಕಿಗೆ ಬಂದಿದೆ. ಇದು ಹಗಲು ದರೋಡೆಯಾಗಿದೆ. ಇಂತಹ ಪ್ರಕರಣಗಳ ಕುರಿತು ದೂರು ನೀಡಿದರೆ, ತನಿಖೆ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರುಪಾಯಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಮೇತ ಸೂಕ್ತ ದಾಖಲೆಗಳನ್ನು ದೂರು ನೀಡಬೇಕು. ಮಹಾನಗರ ಪಾಲಿಕೆ ಆಯುಕ್ತರಿಗೆ ಲೋಕಾಯುಕ್ತರಿಗೆ ಪ್ರಕರಣದ ತನಿಖೆ ನಡೆಸುವಂತೆ ಶಿಫಾರಸು ಮಾಡುವ ಅಧಿಕಾರ ಇಲ್ಲ. ರಾಜ್ಯ ಸರ್ಕಾರಕ್ಕೆ ಮಾತ್ರ ಶಿಫಾರಸು ಮಾಡುವ ಅಧಿಕಾರವಿದೆ. ತೆರಿಗೆ ವಂಚನೆ ಪ್ರಕರಣ ಸಂಬಂಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ, ತನಿಖೆ ಮಾಡಲಾಗುವುದು ಎಂದು ಹೇಳಿದರು.
ನಾವು ಬರುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಕೆಲವರು ಎಚ್ಚರ ವಹಿಸಿದ್ದಾರೆ. ಆದರೆ, ಎಲ್ಲವೂ ಒಂದೇ ದಿನದಲ್ಲಿ ಎಲ್ಲ ವ್ಯವಸ್ಥೆ ಸರಿಯಾಗುವುದಿಲ್ಲ. ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಕೈಗೊಂಡಿರುವ ಕಾಮಗಾರಿಗಳ ಲೋಪದೋಷದ ಬಗ್ಗೆ ದೂರುಗಳು ಬಂದಿವೆ. ಸರಿಯಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಾರ್ವಜನಿಕರ ಅರ್ಜಿ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗದ ಕಟ್ಟಡ ಸೋರುತ್ತಿದೆ. ಇಲ್ಲಿಯೇ ವಿದ್ಯುತ್ ಸಂಪರ್ಕದ ಪಾಯಿಂಟ್‌ಗಳಿವೆ. ಅಲ್ಲಿನ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದರು.ಈಗಾಗಲೇ 13 ಸಾವಿರ ಅರ್ಜಿಗಳನ್ನು ನಾವು ವಿಲೇವಾರಿ ಮಾಡಿದ್ದೇವೆ. ಇನ್ನೂ 25 ಸಾವಿರ ಅರ್ಜಿಗಳನ್ನು ಇತ್ಯರ್ಥಮಾಡಬೇಕಿದೆ. ರಾಜ್ಯ ಲೋಕಾಯುಕ್ತದಲ್ಲಿ 35 ನ್ಯಾಯಮೂರ್ತಿಗಳಿದ್ದಾರೆ. ಸಿಬ್ಬಂದಿ ಕೊರತೆ ಇದೆ. ಆದಾಗ್ಯೂ ನಾವು ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.-----------