ಪರಿಚಿತರಿಂದಲೇ ಹೆಣ್ಣುಮಕ್ಕಳಿಗೆ ಶೋಷಣೆ, ದೌರ್ಜನ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್

KannadaprabhaNewsNetwork |  
Published : Nov 26, 2024, 12:49 AM ISTUpdated : Nov 26, 2024, 01:04 PM IST
25ಸಿಎಚ್‌ಎನ್‌55ಚಾಮರಾಜನಗರದ ಶ್ರೀಶಕ್ತಿ ಭವನದಲ್ಲಿ  ಹಮ್ಮಿಕೊಂಡಿದ್ದ  ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ಅಂತರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್‌ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಹೆಣ್ಣು ಅಪರಿಚಿತರಿಗಿಂತಲೂ ಹೆತ್ತವರು, ಒಡಹುಟ್ಟಿದವರು, ಪತಿ, ಆಪ್ತರು ಹಾಗೂ ಮಕ್ಕಳಿಂದಲೂ ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುತ್ತಿರುವ ಪ್ರಕರಣಗಳೂ ಸಹ ಕಂಡು ಬರುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು. 

  ಚಾಮರಾಜನಗರ : ಹೆಣ್ಣು ಅಪರಿಚಿತರಿಗಿಂತಲೂ ಹೆತ್ತವರು, ಒಡಹುಟ್ಟಿದವರು, ಪತಿ, ಆಪ್ತರು ಹಾಗೂ ಮಕ್ಕಳಿಂದಲೂ ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುತ್ತಿರುವ ಪ್ರಕರಣಗಳೂ ಸಹ ಕಂಡು ಬರುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.

ನಗರದ ಶ್ರೀಶಕ್ತಿ ಭವನದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣ ಘಟಕ ಹಾಗೂ ಆಸರೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ವಿದ್ಯಾವಂತಳಾಗಿ, ಆರ್ಥಿಕವಾಗಿ ಸಬಲೆಯಾದರೂ ತೊಂದರೆಗೆ ಒಳಗಾಗುತ್ತಿರುವುದನ್ನು ನೋಡಬಹುದಾಗಿದೆ. ದೌರ್ಜನ್ಯಗಳನ್ನು ಶಾರೀರಿಕ, ಲೈಂಗಿಕ, ಮಾನಸಿಕ, ಭಾವನಾತ್ಮಕ, ಸಾಂಪ್ರದಾಯಿಕ ದೌರ್ಜನ್ಯಗಳೆಂದು ವಿಂಗಡಿಸಬಹುದು. ಮಹಿಳೆಯರು ಮೌನವಹಿಸಿ ಸಹಿಸಿಕೊಂಡು ಕಾಲಕ್ರಮೇಣ ದೌರ್ಜನ್ಯವೂ ನಿಲ್ಲುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಹೊರಬರಲೇಬೇಕಿದೆ. ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.

ಮಹಿಳೆಯರು ಎಲ್ಲ ರಂಗದಲ್ಲೂ ಪುರುಷ ಸಮಾನವಾಗಿ ಇದ್ದಾರೆ. ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನು ಕಾಯ್ದೆಗಳಿವೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ವರದಕ್ಷಿಣೆ ನಿಷೇಧ ಕಾಯ್ದೆ, ಸಮಾನ ಕೆಲಸಕ್ಕೆ ಸಮಾನ ವೇತನ, ಶಿಶುಪಾಲನ ರಜೆ ಈ ಎಲ್ಲವೂ ಮಹಿಳಾ ಸಬಲೀಕರಣಕ್ಕೆ ಬಂದ ಕಾನೂನುಗಳು. ಇದರ ಬಗ್ಗೆ ಅರಿವು ಹೊಂದಿ ಇತರರಿಗೂ ತಿಳಿಸಬೇಕು ಎಂದರು.

ಕಾನೂನಿನ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಬಂದು ಮಾಹಿತಿ ಹಾಗೂ ದೂರನ್ನು ನೀಡಬಹುದು ಅವರಿಗೆ ಉಚಿತವಾಗಿ ಕಾನೂನು ಅರಿವು, ನೆರವು ನೀಡಲಾಗುವುದು ಎಂದು ತಿಳಿಸಿದರು.

ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ. ಸುರೇಶ್ ಮಾತನಾಡಿ, ಮಹಿಳೆಯರು ಮನೆ, ಸಮಾಜ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಎದುರಿಸುವುದನ್ನು ನೋಡಬಹುದಾಗಿದೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ತಡೆಗಟ್ಟುವಿಕೆ ಬಗ್ಗೆ ತಿಳಿಸಲು ಪ್ರತಿ ವರ್ಷ ನ. 25ರಂದು ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ಕಂಡು ಬಂದರೆ ಮಹಿಳಾ ಸಾಂತ್ವನ ಕೇಂದ್ರ ಸಹಾಯವಾಣಿ 1091 ಮತ್ತು 181 ಸಂಖ್ಯೆಗೆ ತಿಳಿಸಬೇಕು. ಮಕ್ಕಳ ಮೇಲೆ ಶೋಷಣೆ ಕಂಡು ಬಂದಲ್ಲಿ 1098ಕ್ಕೆ ಕರೆ ಮಾಡಿದರೆ ನೆರವಿಗೆ ಬರಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಮಾತನಾಡಿ, ಹೆಣ್ಣನ್ನು ಕಟುವಾಗಿ ಟೀಕಿಸುವುದು, ಕಟ್ಟುಪಾಡುಗಳನ್ನು ಹೇರುವುದು, ಅಶ್ಲೀಲ ಪದ ಬಳಸಿ ಮೆಸೇಜುಗಳ ಮೂಲಕ ಶೋಷಿಸುವುದು ದೌರ್ಜನ್ಯವಾಗಲಿದೆ. ಈ ಎಲ್ಲದರ ವಿರುದ್ದ ಮಹಿಳೆಯರು ಹೋರಾಟ ಮಾಡಬೇಕು ಎಂದರು.

ಮಕ್ಕಳ ರಕ್ಷಣಾ ಘಟಕದ ಆಪ್ತಸಮಾಲೋಚಕಿ ಮೇಘ ಮಾತನಾಡಿ, ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಅನೇಕ ದೌರ್ಜನ್ಯಗಳಾಗುತ್ತಿದ್ದು. ಚಾಮರಾಜನಗರ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮನೆಯಲ್ಲಿ ಪೋಷಕರು ಹೆಣ್ಣುಮಕ್ಕಳಿಗೆ ಅವರ ರಕ್ಷಣೆ ಬಗ್ಗೆ ಅಗತ್ಯ ಗಮನವನ್ನು ನೀಡಬೇಕು. ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಒಳ್ಳೆಯ ಗುಣಗಳನ್ನು ತಿಳಿಸಿಕೊಡಬೇಕು. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ಮಾಡಬಾರದು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಶಿವಲೀಲಾ, ಇತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ