ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂವಿಧಾನದಲ್ಲಿ ಮಹಿಳೆಯರ ಪರ ಕಾನೂನುಗಳು ಇದ್ದರೂ ಕೂಡ ಅವರ ಮೇಲಿನ ಶೋಷಣೆ, ದೌರ್ಜನ್ಯ ಮಾತ್ರ ನಿಂತಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾನಸ-ಸಿಕ್ಕಂ, ಜಿಲ್ಲಾ ಸಂಪನ್ಮೂಲ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನತೆ ಸಿಕ್ಕಿದೆ. ಅನೇಕ ಕಾನೂನುಗಳು ಮಹಿಳೆಯರ ಪರ ಬಂದಿದೆ. ಕಾರ್ಮಿಕರ ಸಮಸ್ಯೆಯಿಂದಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆರಂಭವಾಯಿತು. ಆದರೂ ಕೂಡ ಮಹಿಳಾ ಕಾರ್ಮಿಕರಿಗೆ ದಿನದ ಕೂಲಿ ಪುರಷರಿಗಿಂತ ಕಡಿಮೆ ಇದ್ದು, ಎಷ್ಟೋ ಹೋರಾಟ ಮಾಡಿದರೂ ಯಾವುದೇ ಸುಧಾರಣೆ ಆಗಿಲ್ಲ ಇನ್ನೂ ಲಿಂಗ ತಾರತಮ್ಮ ನಡೆಯುತ್ತಿರುವುದು ವಿಷಾದಕರ ಎಂದರು.
ಮಹಿಳೆಯರೂ ಕೂಡ ಗೌರವದಿಂದ ಸಮಾಜದಲ್ಲಿ ನಡೆಯಬೇಕು. ಉನ್ನತ ಮಟ್ಟದ ಅಧಿಕಾರಿಗಳಿಗೆ ಕಿರಿಯ ಮಹಿಳಾ ಅಧಿಕಾರಿಗಳು ಗೌರವ ಕೊಡುವ ಸಂಸ್ಕಾರ ಕಲಿತುಕೊಳ್ಳಬೇಕು. ಮಹಿಳೆಯರು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದ ಅವರು ಮಹಿಳಾ ದಿನಾಚರಣೆಯ ಶುಭಾಶಯ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಮಾತನಾಡಿ, ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. ಕಾನೂನಡಿಯಲ್ಲಿ ಎಲ್ಲರೂ ಸಮಾನರು. ಹಿಂದೆ ಮಹಿಳೆಯರು ನಾಲ್ಕು ಗೋಡೆಗೆ ಸೀಮಿತವಾಗಿದ್ದರು. ಪ್ರಸುತ ದಿನಮಾನಗಳಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ನಂಜಯ್ಯ ಮಾತನಾಡಿ, ಮಹಿಳೆಯರಿಗೆ ಪ್ರಾಚೀನ ಕಾಲದಲ್ಲಿ ಶಿಕ್ಷಣ ಇರಲಿಲ್ಲ. ಮಹಿಳೆ ಮನೆಗೆ ಸೀಮಿತವಾಗಿದ್ದಳು. ಜ್ಯೋತಿಬಾಫುಲೆ, ಡಾ.ಬಿ.ಆರ್.ಅಂಬೇಡ್ಕರ್ ಮಹಿಳೆಯರಿಗೆ ಸಮಾನತೆ ಕೊಟ್ಟರು. ಹಾಗಾಗಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಬಲರಾಗಿದ್ದಾರೆ ಎಂದರು.ಮಾನನ -ಸಿಕ್ಕಂ ಜಿಲ್ಲಾ ಸಂಯೋಜಕ ಕೆ.ಸಿ.ರೇವಣ್ಣ ಪ್ರಾಸ್ತಾವಿಕವಾಗಿ ಪ್ರತಿವರ್ಷದಂತೆ ನಮ್ಮಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗಿದ್ದು, ಮಹಿಳಾ ದೌರ್ಜನ್ಯ, ಶೋಷಣೆ ವಿರುದ್ಧ ಕೆಲಸ ಮಾಡಿ ಸಂತ್ರಸ್ಥರಿಗೆ ನ್ಯಾಯ ದೊರಸಿಕೊಡುವ ಕೆಲಸ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ, ಜಿಲ್ಲಾ ತರಬೇತಿ ಸಂಯೋಜಕ ಟಿ.ಜೆ.ಸುರೇಶ್, ಜನ ಹಿತಾಶಕ್ತಿ ಹೋರಾಟ ವೇದಿಕೆ ಮಹಿಳಾ ಜಿಲ್ಲಾಧ್ಯಕ್ಷೆ ಕಾವ್ಯ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಶಿವಲೀಲಾ ಬೆಟಗೆರೆ, ಕಸ್ತೂರಿ, ಪ್ರಾಂಶುಪಾಲ ಸಿ.ರಂಗಸ್ವಾಮಿ ಹಾಜರಿದ್ದರು.