ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನೀಡುವ ತಾಂತ್ರಜ್ಞಾನದಿಂದ ಜಿಲ್ಲೆಯಲ್ಲಿ ರೈತರು ಉತ್ಕೃಷ್ಟ ಮಾವಿನ ಹಣ್ಣುಗಳ ಉತ್ಪಾದನೆಯ ಜೊತೆಗೆ ರಫ್ತು ಮಾಡುತ್ತಿದ್ದಾರೆ. ಇತ್ತಿತ್ತಲಾಗಿ ಮಾವಿನ ಬೆಳೆಯಲ್ಲಿ ಅಧಿಕ ಸಾಂದ್ರತೆ ಹಾಗೂ ಪೂರಕವಾದ ವೈಜ್ಞಾನಿಕ ಸಲಹೆಗಳಿಂದ ರೈತರು ಹೆಚ್ಚಿನ ಮಟ್ಟದಲ್ಲಿ ಮಾವಿನ ಬೆಳೆ ಬೆಳೆಯುತ್ತಿದ್ದಾರೆ ಎಂದು ಮಾವಿನ ಬೆಳೆಯ ಪ್ರಗತಿಪರ ರೈತ ಬಿ.ಎಂ. ದೇಸಾಯಿ ತಿಳಿಸಿದ್ದಾರೆ.ಮಾವಿನ ಬೆಳೆಯ ನೂತನ ತಾಂತ್ರಿಕತೆ ವಿಚಾರಗೋಷ್ಠಿಯಲ್ಲಿ ಮಾತನಾಡಿ, ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಶ್ವವಿದ್ಯಾಲಯಕ್ಕೆ ನೇರವಾಗಿ ವಿಜ್ಞಾನಿಗಳ ಭೇಟಿ ಮಾಡಿ ಜೈವಿಕ ಪೀಡೆನಾಶಕಗಳು ಹಾಗೂ ಜೈವಿಕ ಗೊಬ್ಬರಗಳ ಬಗ್ಗೆ ಮಾಹಿತಿ ಪಡೆದು, ಮಾವಿನ ವಿವಿಧ ಬೆಳೆಯ ಹಂತಗಳಲ್ಲಿ ವೈಜ್ಞಾನಿಕ ಸಲಹೆಯನ್ನು ರೈತರು ವಿಜ್ಞಾನಿಗಳಿಂದ ಪಡೆಯಲು ಅವಕಾಶವಿದೆ. ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆ ಮಾಡಿದರೆ ಮಾತ್ರ ತೋಟಗಾರಿಕೆ ಲಾಭವಾಗುವುದು ಎಂದು ರೈತರಿಗೆ ಕರೆ ನೀಡಿದರು.
ವಿಶ್ವವಿದ್ಯಾಲಯದಿಂದ ನೂತನವಾಗಿ ಮಾವು ಬೆಳೆಗಾರರ ಸಂಘ ಸ್ಥಾಪಿಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಗತಿಪರ ರೈತರ ಕ್ಷೇತ್ರಗಳಲ್ಲಿ ಮಾವಿಗೆ ಬರುವ ರೋಗ ಕೀಟ ಪೋಷಕಾಂಶಗಳ ಸಮಗ್ರ ನಿರ್ವಹಣೆ ಹಾಗೂ ರೈತರ ಕ್ಷೇತ್ರದಲ್ಲಿಯೇ ಪ್ರಾತ್ಯಕ್ಷಿಕೆಗಳನ್ನು ಈ ವರ್ಷ ಪ್ರಾರಂಭಿಸಲಾಗುವುದು ಎಂದ ಅವರು, ಹೋದ ವರ್ಷ ವೈಜ್ಞಾನಿಕ ಸಲಹೆ ಪಡೆದ ಜಿಲ್ಲೆಯ ವಿವಿಧ ಭಾಗಗಳ ರೈತರ ಅಭಿಪ್ರಾಯ ಸಂಗ್ರಹಿಸಿ ಅವುಗಳಿಗೆ ಅನುಗುಣವಾಗಿ ತಾಂತ್ರಿಕ ಸಲಹೆಯನ್ನು ರೈತರ ಕ್ಷೇತ್ರಗಳ ಭೇಟಿ ನೀಡಿ ರೈತರಿಗೆ ನೀಡಲಾಗುವುದು ಎಂದು ಸಲಹೆ ನೀಡಿದರು.ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಸಂಘಟಕ ಪ್ರಾಧ್ಯಾಪಕ ಡಾ.ವಸಂತ ಗಾಣಿಗೇರ ಅವರು ಮಾತನಾಡಿ, ಮಾವಿನ ಬೆಳೆಗಾರರ ಸಂಘದ ಮೂಲ ತಾಂತ್ರಿಕ ರೂಪುರೇಷೆ ತಿಳಿಸಿ ಹೊರ ರಾಜ್ಯಗಳಿಗೆ ಹೊರದೇಶಗಳಿಗೆ ಬಾಗಲಕೋಟೆ ಜಿಲ್ಲೆಯಿಂದ ರಫ್ತು ಮಾಡುವ ಅವಕಾಶ ಕುರಿತು ವಿವರಿಸಿದರು.
ವಾತಾವರಣ ಬದಲಾಗುವ ವೈಪರ್ಯ ಆಧರಿಸಿ ನವಂಬರ್ ತಿಂಗಳದಿಂದ ಮಾವಿನ ಹೂ ಪ್ರಾರಂಭವಾಗಲು ಬೇಕಾಗುವ ಮುಖ್ಯ ಪೋಷಕಾಂಶಗಳು, ಲಘು ಪೋಷಕಾಂಶಗಳು, ಹೂ ಬಿಡಲು ಬಳಸುವ ಸಸ್ಯ ಪ್ರಚೋದಕ ಹಾಗೂ ಹೂ ಅಂಕುರಗೊಂಡು ಸಣ್ಣ ಕಾಳಿನಷ್ಟ ಗಾತ್ರವಿದ್ದಾಗ ನೀಡಬೇಕಾದ ವೈಜ್ಞಾನಿಕ ಸಲಹೆ ಹಾಗೂ ಜಿಲ್ಲೆಗೆ ಸೂಕ್ತವಾದ ವಿವಿಧ ಮಾವಿನ ತಳಿಗಳನ್ನು ಬೆಳೆಯುವ ಅವಕಾಶ ಕುರಿತು ರೈತರಿಗೆ ಹಣ್ಣು ವಿಜ್ಞಾನದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆನಂದ ನಂಜಪ್ಪನವರ ವಿಸ್ತಾರವಾದ ಮಾಹಿತಿ ನೀಡಿದರು.ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳಲ್ಲಿ ಮಾವಿನ ಬೆಳೆಗೆ ಬರುವ ಜಿಗಿ ಹುಳುವಿನ ಹತೋಟಿ ಕ್ರಮವನ್ನು ಹಾಗೂ ಹಣ್ಣು ಹುಳುವಿನ ಬಾಧೆ ನಿಯಂತ್ರಿಸುವ ಕಡಿಮೆ ಖರ್ಚಿನ ಆಕರ್ಷಕ ಬಲೆಗಳ ಸೂಕ್ತ ಮಾಹಿತಿ ನೀಡುವುದರ ಜೊತೆಗೆ ನಾವೇ ಬಲೆಗಳನ್ನು ನಿರ್ಮಿಸಿ ರೈತರಿಗೆ ನೀಡುತ್ತೇವೆ ಎಂದು ಕೀಟಶಾಸ್ತ್ರಜ್ಞ ಡಾ.ಚಂದ್ರಶೇಖರ್ ರೈತರಿಗೆ ತಿಳಿಸಿದರು. ಹಣ್ಣು ಮಾಗಿಸುವ ಅನೇಕ ರಾಸಾಯನಿಕಗಳ ಬಳಕೆಯಿಂದ ಮನುಷ್ಯನಿಗೆ ಕ್ಯಾನ್ಸರ್ ರೋಗ ಬರುವುದು. ಆದ್ದರಿಂದ ವೈಜ್ಞಾನಿಕ ಸಲಹೆ ಪಡೆಯಲು ರೈತರಿಗೆ ವಿನಂತಿಸಿದರು. ಮಾವು ರಫ್ತು ಮಾಡುವ ವಿವಿಧ ಮಾರುಕಟ್ಟೆ ಸಂಸ್ಥೆಗಳ ಸೂಕ್ತ ಪರಿಚಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಸ್ಥೆಗಳನ್ನು ರೈತರಿಗೆ ಅರ್ಥಶಾಸ್ತ್ರಜ್ಞ ಶ್ರೀಪಾದ ವಿಶ್ವೇಶ್ವರ ತಿಳಿಸಿದರು.
ಮಾವಿನ ಬೆಳೆಯ ವಿವಿಧ ಹಂತಗಳಲ್ಲಿ ಬರುವ ಮುಖ್ಯ ರೋಗಗಳಾದ ಬೂದು ತುಪ್ಪಟ ರೋಗ, ಎಲೆ ಚುಕ್ಕಿ ಹಾಗೂ ಚಿಬ್ಬು ರೋಗದ ಲಕ್ಷಣದ ಜೊತೆಗೆ ಹತೋಟಿ ಕ್ರಮ ಕುರಿತು ರೋಗಶಾಸ್ತ್ರಜ್ಞ ಡಾ.ರಮೇಶ ತಿಳಿಸಿದರು. ಕಾಯಿಕಟ್ಟಿ ಹಣ್ಣುವಾಗುವ ಹಾಗೂ ನೈಸರ್ಗಿಕವಾಗಿ ಹಣ್ಣು ಮಾಡುವ ಪದ್ಧತಿಗಳನ್ನು ಹಾಗೂ ಮಾವಿನ ಕೊಯ್ಲೋತ್ತರ ತಂತ್ರಜ್ಞಾನದ ಕುರಿತು ಡಾ. ವೀರೇಶ ಹಿರೇಮಠ ತಿಳಿಸಿದರು.ಮಾವು ವಿಚಾರ ಸಂಕಿರಣದ ಅಧ್ಯಕ್ಷತೆ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ವಹಿಸಿದ್ದರು. ವಿಚಾರ ಸಂಕೀರ್ಣದಲ್ಲಿ ಪ್ರಗತಿಪರ ರೈತರಾದ ವೆಂಕನಗೌಡ, ಕೃಷ್ಣೇಗೌಡ, ಎಡಹಳ್ಳಿ, ನಾಯಕ, ಶಂಕರ ತಾಳಿಕೋಟಿ ಹಾಗೂ ಈಗಾಗಲೇ ತಮ್ಮ ಪ್ರಯತ್ನದಿಂದಾಗಿ ಮಾರುಕಟ್ಟೆಯ ಲೈಸೆನ್ಸ್ ಪಡೆದಿರುವ ಪ್ರಭುಗೌಡ ಪಾಟೀಲ ಉಪಸ್ಥಿತರಿದ್ದು, ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ರೈತರಿಗೆ ಸಲಹೆ ನೀಡುವ ಮಾರ್ಗಗಳನ್ನು ಸೂಚಿಸಿದರು. ಸ್ವಾತಿ ಪಾಟೀಲ ನಿರೂಪಿಸಿದರು ತೋಟಗಾರಿಕ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ.ರುದ್ರೇಶ ವಂದಿಸಿದರು.
ಮಾವಿಗೆ ರೋಗ ಹಾಗೂ ಕೀಟಗಳ ಬಾಧೆ ಇತ್ತಿತ್ತಲಾಗಿ ಹೆಚ್ಚಾಗಿರುವುದರಿಂದ ಅವುಗಳ ಸಮಗ್ರ ಹತೋಟಿ ವೈಜ್ಞಾನಿಕ ಸಲಹೆ ಮೇರೆಗೆ ಮಾತ್ರ ಸಾಧ್ಯವೆಂದು ಹೇಳಿದರಲ್ಲದೇ ಅದರಂತೆ ಕಾಲಕಾಲ ತಕ್ಕಂತೆ ಗಿಡಗಳಿಗೆ ಬಹಳ ಅಭಿರುಚಿಯಿಂದ ಸಂರಕ್ಷಣೆ ಮಾಡಿದಲ್ಲಿ ರೈತರು ಹೆಚ್ಚು ಲಾಭ ಪಡೆಯಲು ಸಾಧ್ಯ.ಡಾ.ತಮ್ಮಯ್ಯ ಡೀನ್ ಸ್ನಾತಕೋತ್ತರ ವಿಭಾಗ ತೋವಿವಿ