ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರಾಜ್ಯ ಸರ್ಕಾರದ ಎರಡನೇ ಅವಧಿಯ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿರುವ ಕುರಿತು ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಈ ಬಾರಿಯಾದರೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂದು ಪಟ್ಟಣದ ಉದ್ಯಮಿ ಹಾಗೂ ಹಿರಿಯ ಮುಖಂಡ ಸಂಗನಗೌಡ ಬಿರಾದಾರ(ಜಿಟಿಸಿ) ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದ್ದಾರೆ.ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಒಂದು ಕಪ್ಪು ಚುಕ್ಕೆಯಿಲ್ಲದೆ ಕಳೆದ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಮುಖಂಡರಾಗಿ ಪಕ್ಷ ನೀಡಿದ ಹಲವು ಮಹತ್ವದ ಜವಾಬ್ದಾರಿಗಳನ್ನು ಹೊತ್ತು ಪಕ್ಷದ ಶಕ್ತಿ ಹೆಚ್ಚಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು, ಎಸ್.ಎಂ.ಕೃಷ್ಣಾ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರೊಂದಿಗೆ ಸೇರಿದಂತೆ ಅನೇಕ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. 6 ಬಾರಿ ಶಾಸಕರಾಗಿ ಅಧಿಕಾರ ನಡೆಸುವ ಮೂಲಕ ಉತ್ತಮ ಸನ್ನಡತೆ ಹೊಂದಿದ ಏಕೈಕ ರಾಜಕಾರಣಿಯಾಗಿದ್ದಾರೆ. ಪ್ರಸ್ತುತವಿರುವ 135 ಕಾಂಗ್ರೆಸ್ ಹಿರಿಯ ಶಾಸಕರಲ್ಲಿ ಇವರು ಒಬ್ಬರಾಗಿದ್ದಾರೆ. ಪ್ರತಿಬಾರಿ ಚುನಾವಣಾ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಅನೇಕ ಕಾಂಗ್ರೆಸ್ ವರಿಷ್ಠರು ನಮ್ಮ ಅಧಿಕಾರದಲ್ಲಿ ಸಚಿವರನ್ನಾಗಿ ಮಾಡಲಾಗುವುದು ಎಂದು ಚುನಾವಣಾ ಪ್ರಚಾರ ಭಾಷಣದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳದೇ ಜನರಿಗೆ ಅನ್ಯಾಯ ಮಾಡಲಾಯಿತು ಎಂದು ಆರೋಪಿಸಿದ್ದಾರೆ.
ಸದ್ಯ ಸರ್ಕಾರದ ಎರಡನೆಯ ಅವಧಿ ಸಚಿವ ಸಂಪುಟ ವಿಸ್ತರಣೆ ಕೂಗು ಬಲವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ವರಿಷ್ಠರು, ಶಾಸಕ ಸಿ.ಎಸ್.ನಾಡಗೌಡ ಅವರನ್ನು ಈ ಬಾರಿ ಸಚಿವ ಸ್ಥಾನ ನೀಡಿ ಗೌರವಿಸುವ ಮೂಲಕ ಮುದ್ದೇಬಿಹಾಳ ಮತಕ್ಷೇತ್ರದ ಜನತೆಗೆ ಕೊಟ್ಟ ಭಾಷೆ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೇ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೌನ ಉಳಿದು ಪ್ರತಿಭಟಿಸಬೇಕಾಗುತ್ತದೆ. ಅಪ್ಪಾಜಿ ನಾಡಗೌಡರು ಮುಗ್ಧ ಹಾಗೂ ಸಂಭಾವಿತ ರಾಜಕಾರಣಿಯಾಗಿದ್ದಾರೆ. ಯಾವತ್ತಿಗೂ ಅಧಿಕಾರಕ್ಕಾಗಿ ಹಟ ಮಾಡಿದವರಲ್ಲ. ಹಾಗಂತ ಅವರ ಮುಗ್ಧತೆಯನ್ನು ತಾಳ್ಮೇ ಎಂದು ಪರೀಕ್ಷೀಸುವುದು ಸರಿಯಲ್ಲ. ಅವರ ಹಿರಿತನ ಗೌರವಿಸಿ, ಕಾಂಗ್ರೆಸ್ ವರಿಷ್ಠರು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಸಚಿವರನ್ನಾಗಿ ಮಾಡಬೇಕು ಇಲ್ಲವಾದರೇ ಮುಂದಿನ ನಮ್ಮ ನಡೆ ಬೇರೆಯದ್ದಾಗಿರುತ್ತದೆ ಮತಕ್ಷೇತ್ರದ ಜನತೆಯ ಪರವಾಗಿ ಒತ್ತಾಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಸದ್ಯ ಸರ್ಕಾರದ ಎರಡನೆಯ ಅವಧಿ ಸಚಿವ ಸಂಪುಟ ವಿಸ್ತರಣೆ ಕೂಗು ಬಲವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ವರಿಷ್ಠರು, ಶಾಸಕ ಸಿ.ಎಸ್.ನಾಡಗೌಡ ಅವರನ್ನು ಈ ಬಾರಿ ಸಚಿವ ಸ್ಥಾನ ನೀಡಿ ಗೌರವಿಸುವ ಮೂಲಕ ಮುದ್ದೇಬಿಹಾಳ ಮತಕ್ಷೇತ್ರದ ಜನತೆಗೆ ಕೊಟ್ಟ ಭಾಷೆ ಉಳಿಸಿಕೊಳ್ಳಬೇಕು.
ಸಂಗನಗೌಡ ಬಿರಾದಾರ, ಹಿರಿಯ ಮುಖಂಡ