ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ತುಮಕೂರು ಜಿಲ್ಲೆಗೆ ಮರಣ ಶಾಸನ: ಬಿ.ಕೆ.ಮಂಜುನಾಥ್

KannadaprabhaNewsNetwork |  
Published : Jun 06, 2025, 11:56 PM ISTUpdated : Jun 06, 2025, 11:57 PM IST
೬ಶಿರಾ೩: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಯನ್ನು ನಾವು ವಿರೋಧಿಸುತ್ತೇವೆ. ಮಾಗಡಿ ಹಾಗೂ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಡಿ.ಕೆ.ಶಿವಕುಮಾರ್ ಅವರು ಹುನ್ನಾರ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ

ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ತುಮಕೂರು ಜಿಲ್ಲೆಗೆ ಮರಣ ಶಾಸನವಾಗಿದ್ದು, ಕುಣಿಗಲ್ ತಾಲೂಕಿಗೆ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ಹರಿಸಲು ಹೊರಟಿರುವ ರಾಜ್ಯದ ಕ್ರಮ ಖಂಡನೀಯ. ಕೂಡಲೇ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಹಾಗೂ ಎಕ್ಸ್ಪ್ರೆಸ್ ಕೆನಾಲ್ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ರಾಜ್ಯ ತೆಂಗು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸಿ ರೈತ ಮುಖಂಡರು, ಸ್ವಾಮೀಜಿಗಳು ಹೋರಾಟ ಮಾಡಿದ್ದರು. ಆ ಹೋರಾಟದಲ್ಲಿ ಭಾಗವಹಿಸಿದ ಸ್ವಾಮೀಜಿಗಳು ಹಾಗೂ ರೈತ ಮುಖಂಡರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು ಖಂಡನೀಯ. ಕೂಡಲೇ ಪ್ರಕರಣಗಳನ್ನು ವಾಪಸ್ಸು ಪಡೆಯಬೇಕು ಹಾಗೂ ಶಿರಾ ಕ್ಷೇತ್ರದ ಶಾಸಕರು ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಬೇಕು. ಮೌನವಾಗಿರುವುದು ಸರಿಯಲ್ಲ ಎಂದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ, ಬರಪೀಡಿತ ಜಿಲ್ಲೆಯಾದ ತುಮಕೂರಿಗೆ ಹೇಮಾವತಿ ನೀರು ಶಕ್ತಿ ತುಂಬಿದೆ. ಹಲವು ಹೋರಾಟಗಳ ತ್ಯಾಗದ ಫಲವಾಗಿ ಶಿರಾ ತಾಲೂಕಿಗೆ ಹೇಮಾವತಿ ನೀರು ಬಂದಿದೆ. ಆದರೆ ರಾಜ್ಯದ ಪ್ರಭಾವಿ ಸಚಿವರು, ಉಪಮುಖ್ಯಮಂತ್ರಿಗಳೂ ಆದವರು ಇಡೀ ರಾಜ್ಯದ ಯೋಗಕ್ಷೇಮ ನೋಡಿಕೊಳ್ಳಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕು. ಈ ಬಗ್ಗೆ ನ್ಯಾಯಾಲಯಗಳು ತೀರ್ಪು ನೀಡಿವೆ. ಎಲ್ಲರಿಗೂ ಕುಡಿಯುವ ನೀರು ಕೊಡುವುದು ರಾಜ್ಯ ಸರಕಾರದ ಕರ್ತವ್ಯ ಎಂದ ಅವರು, ಈಗಾಗಲೇ ಕುಣಿಗಲ್ ತಾಲೂಕಿಗೆ ನಿಗದಿಯಾಗಿರುವ ನೀರನ್ನು ಕಾಲುವೆ ಮೂಲಕ ತೆಗೆದುಕೊಂಡು ಹೋಗಲು ನಮ್ಮದೇನು ಅಭ್ಯಂತರವಿಲ್ಲ. ಅದನ್ನು ಬಿಟ್ಟು ಕನಕಪುರ ಮತ್ತು ರಾಮನಗರ ಜಿಲ್ಲೆಯ ಹಲವು ಕೆರೆಗಳಿಗೆ ನೀರನ್ನು ತೆಗೆದುಕೊಳ್ಳುವ ಹುನ್ನಾರ ನಡೆಯುತ್ತಿದೆ. ೧೨ ಅಡಿ ಪೈಪ್ ಲೈನ್ ಮೂಲಕ ನೀರು ತೆಗೆದುಕೊಂಡು ಹೋದರೆ ಇಡೀ ಜಿಲ್ಲೆ ಬರಪೀಡಿತವಾಗುತ್ತದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಹೋರಾಟಗಾರರ ಪರವಾಗಿ ನಾವು ಬೆಂಬಲ ನೀಡುತ್ತೇವೆ. ಕಾಮಗಾರಿ ಸ್ಥಗಿತಗೊಳ್ಳುವವರೆಗೂ ಹೋರಾಟ ನಡೆಯುತ್ತದೆ. ಈ ಬಗ್ಗೆ ಹೇಮಾವತಿ ಹರಿಕಾರರು ಎನಿಸಿಕೊಂಡಿರುವ ಶಿರಾ ಶಾಸಕರು ಧ್ವನಿ ಎತ್ತಬೇಕು ಎಂದರು.

ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್. ಉಗ್ರೇಶ್ ಮಾತನಾಡಿ, ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಯನ್ನು ನಾವು ವಿರೋಧಿಸುತ್ತೇವೆ. ಮಾಗಡಿ ಹಾಗೂ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಡಿ.ಕೆ.ಶಿವಕುಮಾರ್ ಅವರು ಹುನ್ನಾರ ನಡೆಸುತ್ತಿದ್ದಾರೆ. ಶಿರಾ, ಮಧುಗಿರಿ, ತುಮಕೂರು ಸೇರಿ ಜಿಲ್ಲೆಯ ಹಲವು ತಾಲೂಕಿನ ಜನರು ಹೇಮಾವತಿ ನೀರು ಕುಡಿಯುತ್ತಿದ್ದೇವೆ. ಆ ನೀರನ್ನು ನಾವು ಉಳಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಗಿರಿಧರ್, ಮಾಜಿ ಬಿಜೆಪಿ ಅಧ್ಯಕ್ಷ ರಂಗಸ್ವಾಮಿ, ಸೂಡಾ ಮಾಜಿ ಅಧ್ಯಕ್ಷ ಈರಣ್ಣ, ಸದಸ್ಯ ನರಸಿಂಹರಾಜು, ಮುಖಂಡರಾದ ನೆರಲಗುಡ್ಡ ಶಿವಕುಮಾರ್, ಇನಾಂಗೊಲ್ಲಹಳ್ಳಿ ಶಿವಣ್ಣ, ಚಿಕ್ಕನಕೋಟೆ ಕರಿಯಣ್ಣ, ಪ್ರಕಾಶ್, ಶಿವಕುಮಾರ್, ಬೊಪ್ಪರಾಯಪ್ಪ, ಭಾಷಾ, ಮಹಿಳಾ ಘಟಕದ ರೇಣುಕಮ್ಮ, ಪದ್ಮ ಮಂಜುನಾಥ್, ಲಲಿತಮ್ಮ, ಯಶಸ್ವಿನಿ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಶವ ಹೂತ ಕೇಸ್‌: 2ನೇ ದಿನವೂ ಅವಶೇಷ ಸಿಗಲಿಲ್ಲ
ಸಚಿವ ಜಾರ್ಜ್‌ ಆಪ್ತ ಉದ್ಯಮಿಗಳ ಮೇಲೆ ತೆರಿಗೆ ಇಲಾಖೆ ದಾಳಿ