ಎಸ್‌ಐಆರ್ ಒಂದು ತಿಂಗಳು ವಿಸ್ತರಿಸಿ: ಜಕ್ಕಪ್ಪನವರ

KannadaprabhaNewsNetwork |  
Published : Jul 07, 2026, 02:30 AM IST
ಎಫ್‌.ಎಚ್‌. ಜಕ್ಕಪ್ಪನವರ | Kannada Prabha

ಸಾರಾಂಶ

ಎಸ್‌ಐಆರ್ ಪರಿಷ್ಕರಣೆ ಹಾಗೂ ಎನ್ಯುಮರೇಷನ್ ಪ್ರಕ್ರಿಯೆಗಾಗಿ ರಾಜ್ಯದಲ್ಲಿ 59,050 ಮತಗಟ್ಟೆಗಳಿದ್ದು, 5.54 ಕೋಟಿ ಮತದಾರರನ್ನು ಗುರುತಿಸಲಾಗಿದೆ. ಈ ಪ್ರಕ್ರಿಯೆಗೆ ಕೇವಲ ಒಂದು ತಿಂಗಳ ಗಡುವು ನೀಡಲಾಗಿದೆ.

ಹುಬ್ಬಳ್ಳಿ:

ವಿಶೇಷ ಮತದಾರರ ಪಟ್ಟಿ (ಎಸ್‌ಐಆರ್‌) ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಲು ಬೂತ್‌ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳಿಗೆ ಒಂದು ತಿಂಗಳ ಗಡವು ನೀಡಲಾಗಿದೆ. ಇದರಿಂದ ಅವರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಅವಧಿಯನ್ನು ಮತ್ತೊಂದು ತಿಂಗಳು ವಿಸ್ತರಿಸಬೇಕು ಎಂದು ವಿಪ ಸದಸ್ಯ, ಕೆಪಿಸಿಸಿ ಎಸ್‌ಐಆರ್ ಪರಿವೀಕ್ಷಣಾ ಸಮಿತಿ ಬೆಳಗಾವಿ ವಿಭಾಗದ ಉಸ್ತುವಾರಿ ಎಫ್.ಎಚ್. ಜಕ್ಕಪ್ಪನವರ ಕೇಂದ್ರ ಚುನಾವಣಾ ಆಯೋಗಕ್ಕೆಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಐಆರ್ ಪರಿಷ್ಕರಣೆ ಹಾಗೂ ಎನ್ಯುಮರೇಷನ್ ಪ್ರಕ್ರಿಯೆಗಾಗಿ ರಾಜ್ಯದಲ್ಲಿ 59,050 ಮತಗಟ್ಟೆಗಳಿದ್ದು, 5.54 ಕೋಟಿ ಮತದಾರರನ್ನು ಗುರುತಿಸಲಾಗಿದೆ. ಈ ಪ್ರಕ್ರಿಯೆಗೆ ಕೇವಲ ಒಂದು ತಿಂಗಳ ಗಡುವು ನೀಡಲಾಗಿದೆ. ಇದರಿಂದಾಗಿ ಬಿಎಲ್‌ಒ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಅಕ್ಷರಸ್ಥರ ಪ್ರಮಾಣ ಶೇ. 75ರಷ್ಟಿದ್ದು, ಅನಕ್ಷರಸ್ಥರಿಗೆ ಫಾರ್ಮ್ ಭರ್ತಿ ಮಾಡಲು ಸಹಾಯ ಮಾಡುವುದು ಅಪರಾಧವಲ್ಲ. ಬದಲಾಗಿ ಅವರ ಮತದಾನ ಹಕ್ಕನ್ನು ರಕ್ಷಿಸುವ ಪ್ರಜಾಪ್ರಭುತ್ವದ ಜವಾಬ್ದಾರಿಯಾಗಿದೆ. ಇದೇ ಕಾರಣಕ್ಕೆ ಅನಕ್ಷರಸ್ಥರ ಪ್ರಮಾಣ ಹೆಚ್ಚಿರುವ ಸಮುದಾಯದವರು ಒಂದೆಡೆ ಸೇರಿ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಎಸ್‌ಐಆರ್‌ ಮೂಲಕ ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ತಳ್ಳಿ ಹಾಕಿದ ಜಕ್ಕಪ್ಪನವರ್, ಕಾಂಗ್ರೆಸ್ ಯಾವುದೇ ಒಂದು ಸಮುದಾಯದ ಪರವಾಗಿ ಅಲ್ಲ, ರಾಜ್ಯದ ಎಲ್ಲ 5.54 ಕೋಟಿ ಮತದಾರರ ಮತದಾನ ಹಕ್ಕು ರಕ್ಷಿಸಲು ಬದ್ಧವಾಗಿದೆ ಎನ್ಯುಮರೇಷನ್ ಫಾರ್ಮ್ ಯಾರಿಂದ ಭರ್ತಿ ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ಚುನಾವಣಾ ಆಯೋಗ ಯಾವುದೇ ನಿರ್ಬಂಧ ವಿಧಿಸಿಲ್ಲ. ಅಗತ್ಯವಿದ್ದರೆ ಕುಟುಂಬದವರು, ಸಮಾಜದ ಮುಖಂಡರು ಅಥವಾ ಸ್ವಯಂಸೇವಕರ ಸಹಾಯ ಪಡೆದು ಫಾರ್ಮ್ ಭರ್ತಿ ಮಾಡಬಹುದು ಎಂದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮತದಾರರ ಪರಿಷ್ಕರಣೆ ಹೆಸರಿನಲ್ಲಿ ಕೆಲವು ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿವೆ. ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಆಸ್ಸಾಂ ಹಾಗೂ ದೆಹಲಿಯಲ್ಲಿ ಲಕ್ಷಾಂತರ ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಹು-ಧಾ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ್, ಗ್ರಾಮೀಣ ಅಧ್ಯಕ್ಷ ಅನೀಲಕುಮಾರ್ ಪಾಟೀಲ, ಹುಡಾ ಅಧ್ಯಕ್ಷ ಶಾಕಿರ್ ಸನದಿ, ಮುಖಂಡ ವಿನೋದ ಅಸೂಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಭಯ ಗುರುಗಳು ಅದ್ಭುತ ರತ್ನಗಳು: ಮಲ್ಲಿಕಾರ್ಜುನ ಶ್ರೀ
ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ಸಿಗಲಿ: ಕಲ್ಲಯ್ಯಜ್ಜನವರು