ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.5 ರಿಯಾಯಿತಿ ಅವಧಿ ವಿಸ್ತರಣೆ: ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಸವಿತಾ
ನಗರ, ಸ್ಥಳೀಯ ಸಂಸ್ಥೆಗಳಲ್ಲಿ (ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ) ಆರ್ಥಿಕ ವರ್ಷದ ಪ್ರಾರಂಭದ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಿದ್ದಲ್ಲೀ ಶೇ.5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜು.31ರವರೆಗೆ ವಿಸ್ತರಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಸವಿತಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೆಲ ಅಂಗನವಾಡಿಗಳಲ್ಲಿ ಆಹಾರದ ಗುಣಮಟ್ಟ ಕಳಪೆ ಇದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ ಸ್ಥಿತಿಗತಿಗಳನ್ನು ಪರಿಶೀಲಿಸಲು ಇತ್ತೀಚೆಗೆ ಕೆಲವು ಅಂಗವಾಡಿಗಳಿಗೆ ಭೇಟಿ ನೀಡಲಾಗಿತ್ತು, ಆ ಸಮಯದಲ್ಲಿ ಕೆಲವೊಂದು ಅಂಗನವಾಡಿಗಳಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿದ್ದು ಕಂಡುಬಂದಿತು. ಅಲ್ಲಿನ ಶೌಚಾಲಯಗಳು ಸ್ವಚ್ಛವಾಗಿರಲಿಲ್ಲ, ಕೆಲವೊಂದು ಅಂಗನವಾಡಿಗಳಲ್ಲಿ ಅಡುಗೆ ಕೋಣೆಗಳೇ ಇರಲಿಲ್ಲ. ಅಲ್ಲಿನ ಸ್ವಚ್ಛತೆಗೆ ಗಮನ ನೀಡಬೇಕಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪರಿಶೀಲಿಸದಿರುವುದು ಪತ್ತೆಯಾಯಿತು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಸಾಕಷ್ಟು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ, ಕೆಲವೆಡೆ ಅವಧಿ ಮುಗಿದ ಆಹಾರ ಪದಾರ್ಥ ಕಂಡುಬಂತು, 3-6 ವರ್ಷದ ಮಕ್ಕಳು ಅಂಗನವಾಡಿಗಳಿಗೆ ಹೋಗುತ್ತಾರೆ. ಅವರಿಗೆ ಗುಣಮಟ್ಟದ ಆಹಾರ ನೀಡದಿದ್ದಲ್ಲಿ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಕೆಲವೊಂದು ಕಡೆ ಶೌಚಾಲಯದ ಬಳಿ ಪಾತ್ರೆಗಳನ್ನು ಸ್ಪಚ್ಛ ಮಾಡಲಾಗುತ್ತಿದೆ, ಕೆಲವು ಅಂಗನವಾಡಿಗಳಲ್ಲಿ ಸಂದರ್ಶಕರ ಪುಸ್ತಕವೇ ಇರಲಿಲ್ಲ ಎಂದರು.
ಅರೆಕಾಲಿಕ ಕಾನೂನು ಸ್ವಯಂಸೇವಕರಿಂದ ಅರ್ಜಿ:
ಶಿಕ್ಷಕರು (ನಿವೃತ್ತ ಶಿಕ್ಷಕರು ಸೇರಿ), ನಿವೃತ್ತ ಸರ್ಕಾರಿ ನೌಕರರು ಮತ್ತು ಹಿರಿಯ ನಾಗರಿಕರು, ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು, ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ವಿದ್ಯಾರ್ಥಿಗಳು, ಕಾನೂನು ವಿದ್ಯಾರ್ಥಿಗಳು(ವಕೀಲರು) ರಾಜಕೀಯೇತರ ಸಂಘಗಳ ಸದಸ್ಯರು, ಸರ್ಕಾರೇತರ ಸಂಘ ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು, ಮೈತ್ರಿ ಸಂಘಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅರೆಕಾಲಿಕ ಕಾನೂನು ಸ್ವಯಂ ಸೇವಕರೆಂದು ನಿರ್ಧರಿಸುವ ಇತರೆ ಯಾವುದೇ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.
ನೇಮಕಾತಿ ತಾತ್ಕಾಲಿಕವಾಗಿರುತ್ತದೆ. ಯಾವುದೇ ಸಂಬಳ, ವೇತನಗಳು ಇರುವುದಿಲ್ಲ. ಕೇವಲ ಗೌರವಧನದ ಆಧಾರದ ಮೇಲೆ ಮೂರು ವರ್ಷದ ಅವಧಿಗೆ ಮಾತ್ರ ನೇಮಕಾತಿ ಮಾಡಲಾಗುವುದು. ಸಮಿತಿಯ ತೀರ್ಮಾನ ಅಂತಿಮ. ಅಭ್ಯರ್ಥಿಗಳಿಗೆ ಈ ಹುದ್ದೆಗಳಲ್ಲಿ ಮುಂದುವರೆಸುವ ಬಗ್ಗೆ ಯಾವುದೇ ಖಾಯಂ ಮಾಡಿಕೊಳ್ಳುವ ಬಗ್ಗೆ ಪ್ರಾಧಿಕಾರ ಯಾವುದೇ ಆಶ್ವಾಸನೆ ನೀಡುವುದಿಲ್ಲ. ಅಭ್ಯರ್ಥಿಗಳು ಆ ಬಗ್ಗೆ ಯಾವುದೇ ಹಕ್ಕು ಮಂಡಿಸಲು ಅರ್ಹರಾಗಿರುವುದಿಲ್ಲ ಎಂದು ಪಿ.ಆರ್.ಸವಿತಾ ಹೇಳಿದರು.