ನಾಯಕನಹಟ್ಟಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಗಂಗಾಧರಪ್ಪ ಮಾಹಿತಿ
ಇದೇ ಮಾ.26ರಂದು ನಡೆಯುವ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿವ ನೀರು ವಿತರಣೆಗೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಎಚ್.ಗಂಗಾಧರಪ್ಪ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ದೇವಸ್ಥಾನದಲ್ಲಿ ಮಾತನಾಡಿದ ಅವರು, ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು ಕಡು ಬೇಸಗೆ ಇರುವುದರಿಂದ ಭಕ್ತರಿಗೆ ಕುಡಿವ ನೀರು ಸರಬರಾಜಿಗೆ ಗಂಭೀರ ಪ್ರಯತ್ನ ಮಾಡಲಾಗಿದೆ. ನಾಯಕನಹಟ್ಟಿ ಪಟ್ಟಣದಲ್ಲಿ ಹೊಸದಾಗಿ 12 ನೀರು ಪೂರೈಕೆ ಕೇಂದ್ರ ಗುರುತಿಸಲಾಗಿದೆ. ಇಲ್ಲಿಂದ ಪಟ್ಟಣದ ವಿವಿಧ ಭಾಗಗಳಿಗೆ 70ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ನಿರಂತರವಾಗಿ ಸರಬರಾಜು ಮಾಡಲಾಗುವುದು. ವಿವಿಧ ಇಲಾಖೆಗಳ ನೀರಿನ ಟ್ಯಾಂಕರ್ ಜೊತೆಗೆ ಹಾಲಿನ ಟ್ಯಾಂಕರ್ ಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಲಾಗುತ್ತದೆ. ಜಾನುವಾರುಗಳಿಗೆ ಆಯ ಕಟ್ಟಿನ ಸ್ಥಳದಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗಿದೆ ಹಾಗೂ ಐದು ಕಡೆ ನೀರಿನ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.ದೇವಸ್ಥಾನ ಪ್ರಾಂಗಣ ಹಾಗೂ ಸರತಿಯಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಶ್ರೀ ತಿಪ್ಪೇಶನ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.