ಕನ್ನಡಪ್ರಭ ವಾರ್ತೆ ಬೆಳಗಾವಿ/ಚಿಕ್ಕೋಡಿ
ಚಿಕ್ಕೋಡಿ ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಪರಿಶಿಷ್ಟ ಜಾತಿ ಸಮುದಾಯದ ಎಲ್ಲ ನಾಯಕರನ್ನೂ ಜಾರಕಿಹೊಳಿ ಕುಟುಂಬದವರು ಮುಗಿಸುತ್ತಲೇ ಬಂದಿದ್ದಾರೆ. ಮಾಜಿ ಶಾಸಕ ಶ್ಯಾಮ ಘಾಟಗೆ, ಮಹಾವೀರ ಮೊಹಿತೆ, ಪ್ರದೀಪ ಮಾಳಗಿ, ಸುರೇಶ ತಳವಾರ ಅವರೆಲ್ಲ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ಇದೇ ಕುಟುಂಬ. ಈಗ ಶಂಭು ಕಲ್ಲೋಳಿಕರ ಅವರನ್ನೂ ಮುಗಿಸಿದ್ದಾರೆ. ಕೊನೆಗೆ ಉಳಿದಿದ್ದು ನಾನೊಬ್ಬನೇ. ಹೀಗಾಗಿ, ನನ್ನ ಬೆನ್ನಿಗೆ ಬಿದ್ದಿದ್ದಾರೆ. ಅವರಿಗೆ ಪರಿಶಿಷ್ಟ ಜಾತಿ ಸಮುದಾಯದ ಏಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದಲಿತ ಸಮಾಜದ ಮೇಲೆ ಅವರಿಗೆ ಕಳಕಳಿ ಇದ್ದರೇ ದಲಿತ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು ಎಂದು ಖಾರವಾಗಿ ಮಾತನಾಡಿದರು.
ಲೋಕಸಭೆ ಚುನಾವಣೆ ಯಶಸ್ವಿಯಾಗಿ ಮುಗಿದಿದೆ. ಚುನಾವಣೆ ಪೂರ್ವದಿಂದಲೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನಂತವರನ್ನು ಬೆಳೆಸುವುದನ್ನು ಬಿಟ್ಟು, ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.ಶಂಭು ಕಲ್ಲೋಳಿಕರ ಅವರನ್ನು ರಾಜಕೀಯವಾಗಿ ಮುಗಿಸಲು ನನ್ನ ಮೇಲೆ ಸತೀಶ ಜಾರಕಿಹೊಳಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ನಾನು ಪಕ್ಷಕ್ಕೆ ಮೋಸ ಮಾಡುವ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಸತೀಶ ಜಾರಕಿಹೊಳಿ ರಾಜ್ಯದಲ್ಲಿಯೇ ಪ್ರಭಾವಿ ನಾಯಕರಿದ್ದಾರೆ. ನಮ್ಮನ್ನು ತುಳಿಯುವ ಕೆಲಸವನ್ನು ಜಾರಕಿಹೊಳಿ ಕುಟುಂಬ ಮಾಡುತ್ತಿದೆ ಎಂದು ದೂರಿದರು.
ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರವಾಗಿ ಕೆಲಸ ಮಾಡಿಲ್ಲವೆಂದು ಸತೀಶ ಆರೋಪಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ. ಇಂಥ ಯಾವುದೇ ದೂರಿಗೂ ನಾನು ದಾಖಲೆ ಸಮೇತ ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಸವಾಲೆಸೆದರು.
ಗೋಷ್ಠಿಯಲ್ಲಿ ಬಸವರಾಜ ಕೋರೆ, ಬಾಳೇಶ ಹಡಕರ, ಕಲಗೌಡ ಪಾಟೀಲ, ವರ್ದಮಾನ ಶಿರಟ್ಟಿ, ಪ್ರದೀಪ ಹಾಲಗೂನಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರವಿ ಗಡ್ಡಿ, ಚನಗೌಡ ಪಾಟೀಲ ಉಪಸ್ಥಿತರಿದ್ದರು.
-ಮಹೇಂದ್ರ ತಮ್ಮಣ್ಣವರ, ಕುಡಚಿ ಮತಕ್ಷೇತ್ರದ ಶಾಸಕ.