ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಸಿಗುವ ಅವಕಾಶವೆಂದರೆ ಅದು ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಎ. ವಿ. ಕೆ. ಕಾಲೇಜಿನ ಪ್ರಾಂಶುಪಾಲ ಡಾ.ಸೀ.ಚ.ಯತೀಶ್ವರ್ ತಿಳಿಸಿದರು.ಅವರು ತಾಲೂಕಿನ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಗುರುವಾರ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪಠ್ಯದ ಜೊತೆಗೆ ಭಾಷಾಭಿಮಾನ ಇರಬೇಕು. ಕನ್ನಡಿಗರಾದ ನಾವು ಅಂದು ಹರಿದು ಹಂಚಿದ್ದ ಕನ್ನಡ ನಾಡನ್ನು ಏಕೀಕರಣಗೊಳಿಸಲು ಹೈದ್ರಬಾದ್ ಕರ್ನಾಟಕ, ಮೈಸೂರು ಪ್ರಾಂತ್ಯ ಹೀಗೆ ನಾನಾ ಭಾಗಗಳಾಗಿದ್ದನ್ನು ಒಟ್ಟುಗೂಡಿಸಲು ನಾಡಿನ ಉದ್ದಗಲಕ್ಕೂ ಹಲವು ಮಹನೀಯರ ತ್ಯಾಗ, ಬಲಿದಾನದ ಶ್ರಮದಿಂದ ಕರ್ನಾಟಕ ನಾಡಾಗಿ ಉಳಿದಿದೆ. ಅದರಿಂದ ಅವರುಗಳ ನೆನಪಿನಲ್ಲಿ ನಾವೆಲ್ಲೂ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದು ಕರ್ತವ್ಯವಾಗಿದೆ.
ವಿದ್ಯಾರ್ಥಿಗಳು ತಮ್ಮ ಮನೋವಿಕಾಸದ ಜೊತೆಗೆ ಓದಿನಲ್ಲೂ ನಿರತರಾಗಿರಬೇಕು, ಸ್ವಾಮಿವಿವೇಕಾನಂದರು ಚಿಕಾಗೋನಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಭಾಷಣ ಮಾಡಿದ್ದನ್ನು ಇಡೀ ವಿಶ್ವವೇ ಕೊಂಡಾಡಿದ್ದು ಇತಿಹಾಸ ಅಂತಹ ಮಹನೀಯರ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಡಿ. ಕುಮಾರ್ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಸಾಹಿತಿ ಬರಾಳು ಶಿವರಾಮ್, ಗ್ರಂಥಪಾಲರಾದ ಡಾ.ನವೀನ್ ಕುಮಾರ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಬಿ.ಆರ್. ರಮೇಶ್, ಕಾಲೇಜಿನ ಅಧೀಕ್ಷಕರಾದ ಅಶೋಕ ಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕರಾದ ಡಾ.ನಾಗೇಂದ್ರ, ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ.ಮಹೇಶ್ ಎಂ. ಕೆ., ದೈಹಿಕ ಶಿಕ್ಷಕರಾದ ಎ. ಎನ್. ಶ್ರೀನಿವಾಸ್ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.ಕಾರ್ಯಕ್ರಮಕ್ಕೂ ಮೊದಲು ಕಾಲೇಜು ಆವರಣದಿಂದ ಅಶ್ವಮೇಧ ಜೊತೆಗೆ ತೆರೆದ ವಾಹನದಲ್ಲಿ ಕನ್ನಡಾಂಬೆ, ವನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ ವೇಷಭೂಷಣದೊಂದಿಗೆ ಕನ್ನಡದ ಬಾವುಟ ಇಡಿದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲರು ಧ್ವಜಾರೋಹಣ ನೆರವೇರಿಸಿದರು.