ಹೊಸಪೇಟೆ: ಸರ್ಕಾರ ಮಹನೀಯರ ಜಯಂತಿಗಳ ಆಚರಣೆಗೆ ಅನುದಾನ ಬಿಡುಗಡೆ ಮಾಡುತ್ತದೆ. ಅದ್ಧೂರಿ ಆಚರಣೆ ಮಾಡಲು ಸಮುದಾಯಗಳು ಕೈ ಜೋಡಿಸಿದಾಗ ಆ ಜಯಂತಿಗಳಿಗೆ ಮೆರುಗು ಹೆಚ್ಚುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಜಯಂತಿಯ ದಿನದಂದು ಯಾವುದೇ ಲೋಪವಾಗಬಾರದು. ಮೆರವಣಿಗೆ, ವೇದಿಕೆ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನೆರವೇರಿಸಬೇಕು. ಉತ್ತಮ ಕಲಾ ತಂಡದವರನ್ನು ಕರೆತಂದು ಜಯಂತಿಯ ಮೆರಗು ಹೆಚ್ಚಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸಮುದಾಯ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.
ಸಮುದಾಯದವರ ಆಶಯದಂತೆ ನಗರಸಭೆ ಆವರಣದಲ್ಲಿ ಈ ಬಾರಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಹಾಗೂ ಕಳೆದ ಬಾರಿ 3 ಕಲಾ ತಂಡಗಳನ್ನು ಕರೆತರಲಾಗಿತ್ತು. ಈ ಬಾರಿ ಐದು ಕಲಾ ತಂಡಗಳನ್ನು ಕರೆಸಲಾಗುವುದು ಎಂದು ಸಭೆಗೆ ಜಿಲ್ಲಾಧಿಕಾರಿಗಳು ತಿಳಿಸಿದರು.ವೇದಿಕೆ ಕಾರ್ಯಕ್ರಮಕ್ಕೆ, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಪೊಲೀಸ್ ಇಲಾಖೆ ಅಧಿಕಾರಿಗಳು ಮಾಡಬೇಕು. ಶಿಷ್ಟಾಚಾರದನ್ವಯ ಜಯಂತಿಯ ಆಮಂತ್ರಣ ಪತ್ರಿಕೆ ಮುದ್ರಿಸಿ, ಆಮಂತ್ರಣ ಪತ್ರಿಕೆಗಳನ್ನು ಗಣ್ಯ ಮಾನ್ಯರಿಗೆ ವಿತರಿಸಬೇಕು. ಜಯಂತಿಯ ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ಜಯಂತ್ಯುತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಜಿಪಂ ಸಿಇಒ ಅಕ್ರಂ ಷಾ, ಸಹಾಯಕ ಆಯುಕ್ತ ವಿವೇಕಾನಂದ ಪಿ., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ನಗರಸಭೆಯ ಪೌರಾಯುಕ್ತ ಚಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಶ್ವೇತಾ ಎಸ್., ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ತಹಸೀಲ್ದಾರ ಶೃತಿ ಎಂ.ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ. ರಂಗಣ್ಣನವರ ಮತ್ತು ಸಮುದಾಯದ ಮುಖಂಡರು ಇದ್ದರು.ಹೊಸಪೇಟೆಯಲ್ಲಿ ಗುರುವಾರ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಕನಕದಾಸರ ಜಯಂತಿಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.