ಸಾಂಸ್ಕೃತಿಕ ಕಾರ್ಯಕ್ರಮ । ವಿದ್ಯಾರ್ಥಿಗಳ ಮೊಬೈಲ್ ಬಳಕೆ ಆರೋಗ್ಯಕರ ಇರಬೇಕು ಎಂದು ಸಲಹೆ
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್. ಮುನಿರಾಜು ಹೇಳಿದರು.
ನಗರದ ಭೋಗಪುರದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಸಮಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿ ವಿದ್ಯಾರ್ಥಿಯು ಓದಿನ ಜತೆ ಕ್ರೀಡೆ, ಸಾಂಸ್ಕೃತಿಕ, ಕಾಲೇಜಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಕೌಶಲ್ಯ ಪೂರ್ಣ ಜೀವನ ವೃದ್ಧಿಸಿಕೊಳ್ಳಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ, ನಿಮಗೆ ನೀವೆ ಬೆಳಕು, ನಿಮ್ಮ ಏಳಿಗೆಗೆ ನೀವೆ ಶಕ್ತಿ ಎಂಬ ಮಹನೀಯರ ತತ್ವವಾಣಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಜೀವನದಲ್ಲಿ ಉತ್ತುಂಗಕ್ಕೇರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಶಿಷ್ಯವೇತನ ಯೋಜನೆಯಡಿ ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶವನ್ನು ಸಮಾಜ ಕಲ್ಯಾಣ ಇಲಾಖೆ ಮಾಡಿಕೊಟ್ಟಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಸುಸಜ್ಜಿತ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ನಿರ್ಮಿಸಿರುವುದು ಇದೇ ಮೊದಲು. ಹಾಸ್ಟೆಲ್ ನಿರ್ವಹಿಸುವ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಯು ಆದಷ್ಟು ಬೇಗ ಕೈಗೊಳ್ಳಲಿದೆ. ಹಾಸ್ಟೆಲ್ ಪ್ರಾರಂಭವಾಗುವವರೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಟ್ಟಣದ ವಿದ್ಯಾರ್ಥಿನಿಲಯದಲ್ಲಿ ಅವಕಾಶ ನೀಡಲಾಗುವುದು ಎಂದರು.
ವಸತಿಯುಕ್ತ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ದೇವರಾಜು ಮಾತನಾಡಿ, 2023-24ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಅಚ್ಚುಕಟ್ಟಾದ ವಸತಿಯುಕ್ತ ಪದವಿ ದರ್ಜೆ ಕಾಲೇಜು ಸ್ಥಾಪನೆಯಾಗಿದ್ದು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಲ್ಲಿ ಮುಂದುವರಿಸುವಂತಹ ಉದ್ದೇಶದಿಂದ ಮಾದರಿ ವಸತಿ ಕಾಲೇಜನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಪ್ರಬುದ್ಧರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.