ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪೆಮ್ಮಂಡ ಕುಟುಂಬ ಸಹಯೋಗದಲ್ಲಿ ಪೊನ್ನಂಪೇಟೆ ಸಮೀಪ ತೂಚಮಕೇರಿ ಗ್ರಾಮದಲ್ಲಿ ‘ಪೆಮ್ಮಂಡ ಒಕ್ಕೊರ್ಮೆ’ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಪೆಮ್ಮಂಡ ಕುಟುಂಬದ ಐನ್ ಮನೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ತವರು ಮನೆ ಹೆಣ್ಣು ಮಕ್ಕಳು, ನೆಂಟರಿಷ್ಟರು, ಗ್ರಾಮಸ್ಥರು ಸೇರಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಒಡ್ಡೋಲಗ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್ ಸಹಿತ ಕೊಡವ ಸಾಂಪ್ರದಾಯಿಕ ಪದ್ಧತಿಯಂತೆ ಅತಿಥಿಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮ:
ಪೆಮ್ಮಂಡ ಕುಟುಂಬದ ಮಹಿಳಾ ತಂಡದಿಂದ ಉಮ್ಮತಾಟ್, ಗ್ರಾಮದ ತಂಡದಿಂದ ಬೊಳಕಾಟ್, ತೋರ ಗ್ರಾಮದ ಗೋಪಮ್ಮ ಮತ್ತು ತಂಡದಿಂದ ಉರುಟಿಕೊಟ್ಟ್ ಆಟ್ ಪ್ರದರ್ಶನ ಗಮನ ಸೆಳೆಯಿತು.ಪೈಪೋಟಿ: ಗಂಡಸರಿಗೆ ಸೀರೆ ಮಡಚುವುದು, ಆಶುಭಾಷಣ ಸ್ಪರ್ಧೆ, ಹೆಂಗಸರಿಗೆ ಚೇಲೆ ಮಡಚುವುದು, ಕೊಡವ ಭಾಷೆಯಲ್ಲಿ ಓದುವ ಸ್ಪರ್ಧೆ, ವಾಲಾಗತಾಟ್ ಸ್ಪರ್ಧೆ ನಡೆಯಿತು.
ಪುಸ್ತಕ ಬಿಡುಗಡೆ: ಕೊಡವ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ ಸಂಚಿಕೆ ‘ಕೊಡವಾಲೆ’ಯನ್ನು ವಿರಾಜಪೇಟೆ ಶಾಸಕ ಪೊನ್ನಣ್ಣ ಬಿಡುಗಡೆ ಮಾಡಿದರು.ಸಾಧಕರಿಗೆ ಸನ್ಮಾನ:
ಅಕಾಡೆಮಿ ವತಿಯಿಂದ ಶಾಸಕ ಪೊನ್ನಣ್ಣ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈಚೆಗೆ ಸುವರ್ಣ ಕರ್ನಾಟಕ ಪ್ರಶಸ್ತಿ ಸ್ವೀಕರಿಸಿದ ಸಮಾಜ ಸೇವಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಮಾಜಿ ಸೈನಿಕ ಮೂಕಳಮಾಡ ಅರಸು ನಂಜಪ್ಪ, ಪೊಯ್ಯೇಟಿರ ಲತಾ ಲಾಲು ಕರುಂಬಯ್ಯ, ಚಿಂಡಮಾಡ ವಿಮಲ ರಮೇಶ್, ಪೆಮ್ಮಂಡ ಅರಸು, ಪೆಮ್ಮಂಡ ಬಿ. ಅಯ್ಯಪ್ಪ, ಪೆಮ್ಮಂಡ ಮಿಟ್ಟು ದೇವಯ್ಯ, ಅಲ್ಲಪಂಡ ರಾಣಿ ಗಣೇಶ್, ಪಿ.ಬಿ. ಜಾನ್ಸಿ, ಚಿಂಡಮಾಡ ಬೋಪಯ್ಯ, ಅಜ್ಜಿಕುಟ್ಟಿರ ಬಿ. ಭೀಮಯ್ಯ, ಪೆಮ್ಮಂಡ ಎಂ. ಅಪ್ಪಯ್ಯ, ಪೆಮ್ಮಂಡ ದೀಪು ರವೀಂದ್ರ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಕುಟುಂಬದ ಅಧ್ಯಕ್ಷ ಪೆಮ್ಮಂಡ ಪಿ. ಅರುಣ ಅವರನ್ನು ಸನ್ಮಾನಿಸಲಾಯಿತು.ಪೆಮ್ಮಂಡ ಕುಟುಂಬದ ಇತಿಹಾಸವನ್ನು ಇಂದಿರ ಬೋಪಣ್ಣ ಮಂಡಿಸಿದರು.
ಪೆಮ್ಮಂಡ ಪುಷ್ಪ ಡಾಲಿ ಪ್ರಾರ್ಥಿಸಿದರು. ಪೆಮ್ಮಂಡ ಪೊನ್ನಪ್ಪ ಸ್ವಾಗತಿಸಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಹಾಜರಿದ್ದರು.ಕೊಡವರು ಪ್ರಾಮಾಣಿಕರು: ಪೊನ್ನಣ್ಣ
ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕಾರ್ಯಕ್ರಮ ಉದ್ಘಾಟಿಸಿ, ಕೊಡವ ಜನಾಂಗ ಹಾಗೂ ನಮ್ಮ ಹಿರಿಯರು ಹಿಂದಿನಿಂದಲೇ ನೇರ- ನಿಷ್ಠುರ ನುಡಿ ಆಡುತ್ತಿದ್ದರು ಹಾಗೂ ಪ್ರಾಮಾಣಿಕತೆಯಿಂದ ಹೆಸರು ಗಳಿಸಿದವರು. ಇದರಿಂದ ಕೊಡವರನ್ನು ದೇಶ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಿದೆ. ಇಂತಹ ನೇರ ನಡೆ-ನುಡಿ ಹಾಗೂ ಪ್ರಾಮಾಣಿಕತೆ ನಮ್ಮಲ್ಲಿ ಬದಲಾವಣೆ ಆಗಬಾರದು. ನಮ್ಮ ಹಿರಿಯರ ಪ್ರಾಮಾಣಿಕತೆ ಮತ್ತು ಸಾಧನೆಯಿಂದ ನಮಗೆ ಗೌರವ ದೊರೆಯುತ್ತಿದೆ. ಹಾಗೆಯೇ ನಮ್ಮ ಒಳ್ಳೆಯ ನಡೆ ನುಡಿ ಪ್ರಾಮಾಣಿಕತೆಯಿಂದ ನಮ್ಮ ಮಕ್ಕಳು ಗೌರವ ಪಡೆಯಬೇಕೆಂದು ಹೇಳಿದರು.ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮಗೆ ಹಿರಿಯರಿಂದ ಬಂದಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ನಮ್ಮಲ್ಲಿ ಒಗ್ಗಟ್ಟು, ಪ್ರೀತಿ,ಆಸೆ ಕೂಡಿಬಾಳುವ ಮನೋಭಾವವನ್ನು ಬಲವರ್ಧನೆ ಗೊಳಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡವ ಸಂಸ್ಕೃತಿ ಎಂಬುದು ಆಲದ ಮರದಂತೆ, ಇದರಲ್ಲಿ 21 ಕೊಡವ ಭಾಷೆ ಸಂಸ್ಕೃತಿ ಅನುಸರಿಸುವ ಜನಾಂಗ ಕೊಂಬೆಗಳಿವೆ. ಇವುಗಳನ್ನು ಉಳಿಸಿ ಪೋಷಿಸಿ ಬೆಳೆಸುವ ಮೂಲಕ ನಾಳೆ ನಮ್ಮ ಮಕ್ಕಳಿಗೆ ತೋರಿಸಿ ಕೊಡಬೇಕಾಗಿದೆ. ನಮಗೆ ಪಾರಂಪರ್ಯವಾಗಿ ಬಂದಿರುವ ಸಂಸ್ಕೃತಿ ಭಾಷೆಯನ್ನು ಪೋಷಿಸಬೇಕಾಗಿದೆ. ಸಂಸ್ಕೃತಿ ಇದ್ದಾಗ ಭಾಷೆ ಇರುತ್ತದೆ, ಭಾಷೆ ಇದ್ದಾಗ ಜನಾಂಗ ಉಳಿಯುತ್ತದೆ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಹೇಳಿದರು.ಸರ್ಕಾರಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ನಮ್ಮ ಹಿರಿಯರು ಮಾಡಿ ಇಟ್ಟಿರುವ ಆಚಾರ-ವಿಚಾರಗಳನ್ನು ನಡೆಸಿಕೊಂಡು ಹೋಗಬೇಕು, ಕೊಡವ ಭಾಷೆಯನ್ನು ಮಾತನಾಡುವ 21 ಜನಾಂಗಗಳು ಸೇರಿಕೊಂಡು ಒಂದಾಗಿ ಪದ್ದತಿ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಯಥಾವತ್ತಾಗಿ ಬಳುವಳಿಯಾಗಿ ನೀಡಬೇಕೆಂದು ಕರೆ ನೀಡಿದರು.