ಮೋಹನ್ ಭಾಗವತ್ ಮೇಲೆ ಕ್ರಮ ಜರುಗಿಸಲು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಆಗ್ರಹ

KannadaprabhaNewsNetwork |  
Published : Jan 18, 2025, 12:48 AM ISTUpdated : Jan 18, 2025, 12:54 PM IST
8 | Kannada Prabha

ಸಾರಾಂಶ

ನೀವು ಸಂವಿಧಾನ ಪಾಲಕರಾಗಿದ್ದರೆ ಶ್ರೀರಾಮಮಂದಿರ ನಿರ್ಮಾಣ ಬಳಿಕ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿಕೆ ನೀಡಿದ್ದ ಮೋಹನ್ ಭಾಗವತ್ ಅವರ ಮೇಲೆ ಕ್ರಮ ಜರುಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ.

  ಮೈಸೂರು : ನೀವು ಸಂವಿಧಾನ ಪಾಲಕರಾಗಿದ್ದರೆ ಶ್ರೀರಾಮಮಂದಿರ ನಿರ್ಮಾಣ ಬಳಿಕ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿಕೆ ನೀಡಿದ್ದ ಮೋಹನ್ ಭಾಗವತ್ ಅವರ ಮೇಲೆ ಕ್ರಮ ಜರುಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿಕೆ ಕೊಟ್ಟಾಗ ಅದಕ್ಕೆ ಅಪಾರ್ಥ ಕಲ್ಪಿಸಿ ಅವರ ಮೇಲೆ ದೂರು ಕೊಡುವ ಕೆಲಸ ಬಿಜೆಪಿಯಿಂದ ನಡೆಯುತ್ತದೆ. ಆದರೆ ನಿಮ್ಮ ಮೂಲಕ ಕೇಳುತ್ತೇನೆ ಮಿಸ್ಟರ್ ಮೋದಿ, ಮಿಸ್ಟರ್ ಅಮಿತ್ ಶಾ ನೀವು ಸಂವಿಧಾನದ ಅಡಿ ಪ್ರಧಾನಿ ಆಗಿರೋದು ಸಚಿವರಾಗಿದ್ದೀರ.

ಮೋಹನ್ ಭಾಗವತ್ ಹೇಳಿಕೆಯಿಂದ ಸಂವಿಧಾನ ಮೇಲೆ ನಿಮಗೆ ಎಷ್ಟು ಗೌರವವಿದೆ ಎಂದು ಗೊತ್ತಾಗುತ್ತದೆ. ನೀವು ನಿಜವಾಗಿಯೂ ಸಂವಿಧಾನ ಪಾಲಕರಾಗಿದ್ದರೆ ಮೋಹನ್ ಭಾಗವತ್ ಮೇಲೆ ಕ್ರಮ ಜರುಗಿಸಿ. ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್.ಎಸ್.ಎಸ್ ಪಾತ್ರ ಏನು? ತ್ಯಾಗ ಬಲಿದಾನದ ಮೂಲಕ ಬಂದಿರುವ ಸ್ವಾತಂತ್ರ್ಯವನ್ನ ಅಣಕು ಮಾಡಿತ್ತೀರಲ್ಲ ನಿಮಗೆ ಬುದ್ದಿ ಭ್ರಮಣೆ ಆಗಿದೆಯಾ? ಎಂದು ಅವರು ಪ್ರಶ್ನಿಸಿದರು.

ಆರ್.ಎಸ್.ಎಸ್ ನವರು ಸಂವಿಧಾನ, ಸ್ವಾತಂತ್ರ್ಯವನ್ನು ವಿರೋಧಿಸುತ್ತೀರಲ್ಲ. ಕೇಂದ್ರ ಸರ್ಕಾರ ಸುಮೊಟೊ ಪ್ರಕರಣವನ್ನು ಮೋಹನ್ ಭಾಗವತ್ ಮೇಲೆ ಹಾಕಬೇಕು. ಇಲ್ಲ ಅಂದ್ರೆ ನೀವು ದೇಶವನ್ನ ಈಸ್ಟ್ ಇಂಡಿಯಾ ಕಂಪನಿಯಂತೆ ಮಾಡಿಕೊಂಡಿದ್ದೀರಿ. ಈ ದೇಶದ ಸ್ವತ್ತನ್ನ ಅಂಬಾನಿ ಅದಾನಿಯವರಿಗೆ ವಹಿಸಲು ಹೊರಟಿದ್ದೀರಿ. ಈ ದೇಶದ ಇತಿಹಾಸ, ಸ್ವಾತಂತ್ರ್ಯ ಚಳುವಳಿಯಲ್ಲಿ ಇತಿಹಾಸವನ್ನ ತಿರುಚುವ ಕೆಲಸವನ್ನ ಆರ್.ಎಸ್.ಎಸ್, ಬಿಜೆಪಿ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿವರು ಕಾಂಗ್ರೆಸ್ ನವರು, ಈ ದೇಶದ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ನವರು ನಿಮ್ಮದಲ್ಲ ಎಂದು ವಾಗ್ದಾಳಿ ನಡೆಸಿದರು. ಜ. 21 ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ನಡೆಯಲಿದೆ. ಸುವರ್ಣಸೌಧದ ಮುಂಭಾಗ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣವಾಗಲಿದೆ. ಕಳೆದ ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಸಮಾವೇಶ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದ ಮುಂದೂಡಲಾಗಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ನ ಅಧ್ಯಕ್ಷತೆವಹಿಸಿ ಅಧಿವೇಶನ ನಡೆಸಿದ್ದರು. ಅದರ ಶತಮಾನೋತ್ಸವದ ಸಂಜರ್ಭದಲ್ಲಿ ಈ ಒಂದು ಕಾರ್ಯಕ್ರಮ ನಡೆಯುತ್ತಿದೆ. ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಎಂಬ ಘೋಷಣೆ ಮೂಲಕ ದೇಶದಲ್ಲಿ ಸಮಾನತೆ, ಸಾಮರಸ್ಯ ಸಾರುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಜರುಗಲಿದೆ ಎಂದರು.

ಮಹಾತ್ಮ ಗಾಂಧಿ ಅವರ ವಿಚಾರ ಧಾರೆ, ಮತ್ತೊಂದು ಕಡೆ ಮಹಾತ್ಮ ಗಾಂಧಿ ಹತ್ಯೆ ಮಾಡಿದ ನಾತುರಾಂ ಗೂಡ್ಸೆ ವಿಚಾರಧಾರೆ ಚರ್ಚೆಗೆ ಬರಲಿದೆ. ಯಾರು ನಾತುರಾಂ ಗೂಡ್ಸೆ ಪರಿಪಾಲಕರಿದ್ದಾರೋ, ಆರ್.ಎಸ್.ಎಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು, 1947ರಲ್ಲಿ ಅಲ್ಲ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದ ಬಳಿಕ ಬಂದಿದೆ ಎನ್ನುತ್ತಾರೆ. ಇವರ ಮನಸ್ಥಿತಿ ಹೇಗಿದೆ ನೋಡಿ. ಈ ದೇಶದ ಸಂವಿಧಾನವನ್ನ ಗೌರವಿಸಬೇಕು. ದೇಶದ ಇತಿಹಾಸ ಪರಂಪರೆಯನ್ನ ಗೌರವಿಸಬೇಕು ಎಂದರು.

ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ಹಲವು ಜೀವಗಳ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ಅದನ್ನ ಅಲ್ಲೆಗಳೆಯುವ ಕೆಲಸವನ್ನ ಆರ್.ಎಸ್.ಎಸ್. ಮಾಡುತ್ತಿದೆ. ಇದನ್ನಏನಂತ ಕರೆಯಬೇಕು ಎಂದು ಗುಡುಗಿದರು.

ಇಂದು ಒಂದು ಡಾಲರ್ ಮೌಲ್ಯದ ಮುಂದೆ ರೂಪಾಯಿ ಮೌಲ್ಯ 86 ರೂ.ಗೆ ಏರಿದೆ. ಕಳೆದ 10 ವರ್ಷದಿಂದ ಸುಮಾರು 132 ಲಕ್ಷ ಕೋಟಿ ಸಾಲ ಮಾಡಿದ್ದಾರೆ. 1947 ರಿಂದ 2014 ರ ವರೆಗೂ ಮಾಡದ ಸಾಲವನ್ನು ಕೇವಲ ಹತ್ತು ವರ್ಷಗಳಲ್ಲಿ ಮಾಡಿದೆ. ಈ ಒಂದು ಸಮಾವೇಶ ಮೂಲಕ ದೇಶದಲ್ಲಿ ಸಂವಿಧಾನವನ್ನ ಉಳಿಸಲು, ಗಾಂಧಿಜೀಯವರ ವಿಚಾರಧಾರೆಗಳನ್ನ ಉಳಿಸಲಿಕ್ಕೆ ಈ ಸಮಾವೇಶ ನಡೆಯುತ್ತಿದೆ. ಇದಕ್ಕೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ:

ಬಿ.ಎಸ್. ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ. ವಿತೌಟ್ ಯಡಿಯೂರಪ್ಪ ನಾಟ್ ಅಟ್ ಆಲ್ ವಿಜಯೇಂದ್ರ. ಬಿಜೆಪಿಯೇ ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ. ಅದನ್ನ ಬಿಟ್ಟು ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ನಮ್ಮ ಪಕ್ಷದ 138 ಸ್ಥಾನಗಳೊಂದಿಗೆ ಸರ್ಕಾರ ಸುಭದ್ರವಾಗಿದೆ. 5 ವರ್ಷಗಳ ಕಾಲ ಭದ್ರವಾಗಿರುತ್ತದೆ. ಬೇರೆ ಯಾರೋ ಹೇಳಿದರು ಅಂತ ನಮ್ಮ ಸರ್ಕಾರ ಬಿದ್ದು ಹೋಗುವುದಿಲ್ಲ. ಯಾರು ಮುಖ್ಯಮಂತ್ರಿ ಇರ್ತಾರೋ ಬಿಡ್ತಾರೋ ಗೊತ್ತಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ಇದ್ದೇ ಇರುತ್ತೆ. ಯಾರು ಸಿಎಂ ಆಗಬೇಕು ಆಗಬಾರದು ಅಂತ ನಾನು ಬೆಂಕಿ ಹಚ್ಚುವ ಕೆಲಸ ಮಾಡಲ್ಲ ಎಂದರು.

ರಾಷ್ಟ್ರ ಮಟ್ಟದಲ್ಲಿ ಜಾತಿಗಣತಿಯನ್ನ ಕೇಂದ್ರ ಸರ್ಕಾರ ಮಾಡಬೇಕು. ಜನ ಗಣತಿಯೊಂದಿಗೆ ಜಾತಿಗಣತಿಯನ್ನ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಮಹಿಳಾ ಮೀಸಲಾತಿಯನ್ನ ಜಾರಿಗೆ ತರಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಶಿವಣ್ಣ, ಈಶ್ವರ್ ಚಕ್ಕಡಿ, ದ್ಯಾವಪ್ಪನಾಯಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ