ಆರೋಗ್ಯಕರ ಜೀವನ ನಿರ್ವಹಣೆಯಿಂದ ಕಣ್ಣಿನ ಆರೈಕೆ ಸಾಧ್ಯ

KannadaprabhaNewsNetwork |  
Published : May 15, 2025, 01:46 AM IST
ಚಿತ್ರದುರ್ಗ ಎರಡನೇ ಪುಟಕ್ಕೆ  | Kannada Prabha

ಸಾರಾಂಶ

ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಆರೋಗ್ಯ ತಪಾಸಣೆ ಶಿಬಿರವ ನೇತ್ರ ತಜ್ಞ ಡಾ.ಬಿ.ಜಿ.ಪ್ರದೀಪ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಆರೋಗ್ಯಕರ ಜೀವನ ನಿರ್ವಹಣೆಯಿಂದ ಕಣ್ಣುಗಳಿಗೆ ಉತ್ತಮ ಆರೈಕೆ ನೀಡಬಹುದಾಗಿದೆ ಎಂದು ಜಿಲ್ಲಾಸ್ಪತ್ರೆಯ ನೇತ್ರ ತಜ್ಞ ಡಾ.ಬಿ.ಜಿ.ಪ್ರದೀಪ್ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಕೆಓಎಫ್ ನಿಗಮದ ಎಲ್ಲಾ ವಿಭಾಗದ ನೌಕರರಿಗೆ ಹಮ್ಮಿಕೊಳ್ಳಲಾದ ಉಚಿತ ನೇತ್ರ ತಪಾಸಣೆ ಹಾಗೂ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಉತ್ತಮವಾದ ಆಹಾರ ಕ್ರಮಗಳನ್ನು ಅನುಸರಿಸುವುದನ್ನು ಜನ ಮರೆತಿದ್ದಾರೆ. ಉತ್ತಮ ಚಟುವಟಿಕೆಯುಳ್ಳ ಜೀವನ ಶೈಲಿ ರೂಢಿಸಿಕೊಂಡಿರುವುದಿಲ್ಲ. ಇವೆಲ್ಲವುಗಳ ವ್ಯತ್ಯಾಸದಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಇಂತಹ ಖಾಯಿಲೆಗಳಿಂದ ಅಕ್ಷಿಪಟಲದ ತೊಂದರೆಯಿಂದ ದೃಷ್ಟಿದೋಷಗಳು, ಅಂಧತ್ವ ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಹಿಂದೆ 40 ವರ್ಷ ವಯಸ್ಸಿನ ನಂತರ ಕನ್ನಡಕ ಕಣ್ಣುಗಳ ಅಲಂಕರಿಸುತ್ತಿತ್ತು. ಹಾಗಾಗಿ ಅದನ್ನು ಚಾಳೀಸು ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಯಾವ ವಯಸ್ಸಿಗಾದರೂ ದೃಷ್ಠಿದೋಷ ಕಾಣಿಸಿಕೊಳ್ಳುತ್ತಿದೆ. ಉತ್ತಮ ಪೋಷಕಾಂಶವುಳ್ಳ ತರಕಾರಿಗಳನ್ನು, ವಿಟಮಿನ್-ಎ ಅಂಶ ಇರುವ ಹಣ್ಣು, ತರಕಾರಿ ಸೇವಿಸಿ ಉತ್ತಮ ದೃಷ್ಟಿ ಹೊಂದಬಹುದಾಗಿದೆ ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸಮೂರ್ತಿ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರು ವಿವಿಧ ರೀತಿಯ ಅಡುಗೆಗಳನ್ನು ಮಾಡುವುದನ್ನೆ ಮರೆತುಬಿಟ್ಟಿದ್ದಾರೆ. ಬೇಳೆ ಸಾರು, ಅನ್ನ ಮಾಡುವುದು ಸರ್ವೆ ಸಾಮಾನ್ಯವಾಗಿದ್ದು, ಬಹುಬೇಗ ಮಧುಮೇಹ ಬರುವ ಲಕ್ಷಣಗಳು ಹೆಚ್ಚಾಗಿವೆ. ಎಲ್ಲಾ ರೀತಿಯ ಧಾನ್ಯ, ಸಿರಿಧಾನ್ಯ, ದ್ವಿದಳ ಧಾನ್ಯಗಳನ್ನು ಮೊಳಕೆ ಕಾಳುಗಳಿಂದ ತಯಾರಿಸುವ ಆಹಾರ ಪದಾರ್ಥಗಳನ್ನು ಬಳಸುವುದು ಅಭ್ಯಾಸ ಮಾಡಿಕೊಳ್ಳಬೇಕು. ದಿನವೂ ಅರ್ಧ ಗಂಟೆ ಉತ್ತಮ ದೈಹಿಕ ಚಟುವಟಿಕೆಗಳಾದ ಯೋಗ, ಧ್ಯಾನ, ವ್ಯಾಯಾಮ, ವಾಕಿಂಗ್ ಮಾಡುವುದರೊಂದಿಗೆ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದು ಸಲಹೆ ನೀಡಿದರು.

ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೈಕೃಷ್ಣ, ಜಿಲ್ಲಾ ಆಸ್ಪತ್ರೆಯ ನೇತ್ರಧಿಕಾರಿಗಳಾದ ಕೆ.ಸಿ.ರಾಮು, ಡಾ.ಐಶ್ವರ್ಯ, ಐಸಿಟಿಸಿ ವಿಭಾಗದ ನಾಗರಾಜ್, ಲೋಕೇಶ್, ಶುಶ್ರೂಷಾಧಿಕಾರಿ ಸ್ವಾತಿ, ಜಿಲ್ಲಾಸ್ಪತ್ರೆಯ ನೇತ್ರ ವಿಭಾಗದ ನೇಹಾ, ಗೀತಾ, ಅನಿಲ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...