ಚಿಕ್ಕಮಗಳೂರು ನಗರಸಭೆಯ ವಿಶೇಷ ಸಾಮಾನ್ಯಸಭೆ
ನಿಯಮ ಉಲ್ಲಂಘಿಸಿ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿರುವ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರಿಗೆ ನಗರಸಭೆಯ ಆಡಳಿತ ನಡೆಸುವ ಸಾಮಾರ್ಥ್ಯವಿಲ್ಲ. ಅವರಿಗೆ ನಿಯಮಗಳ ಪರಿಜ್ಞಾನವಿಲ್ಲ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬುಧವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಿಯಮಾನುಸಾರ ಯಾವುದೇ ಸಾಮಾನ್ಯಸಭೆ ಕರೆಯುವುದಾದರೆ ಎಂಟು ದಿನಗಳ ಮುಂಚಿತವಾಗಿ ಸದಸ್ಯರಿಗೆ ಮಾಹಿತಿ ನೀಡಬೇಕು. ವಿಶೇಷ ಸಭೆ, ತುರ್ತು ಸಭೆಗಳಿಗೆ ಕನಿಷ್ಠ ಮೂರು ದಿನದ ಮೊದಲು ಮಾಹಿತಿ ನೀಡಬೇಕು. ನಗರಸಭೆ ನಿಯಮಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿಯಿಲ್ಲ. ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಈ ಸಭೆಗೆ ನಾವು ಭಾಗವಹಿಸಬೇಕೆ, ಅಭಿವೃದ್ಧಿ ಪ್ರಸ್ತಾವನೆಗಳಿಗೆ ನಾವು ಸಮಿತಿ ಸೂಚಿಸಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು,ಮುಂದಿನ ದಿನಗಳಲ್ಲಿ ಯಾವುದೇ ಸಭೆ ಕರೆಯುವುದಾದರೆ ಕನಿಷ್ಠ 8 ದಿನಗಳ ಮೊದಲು, ತುರ್ತು ಸಭೆಗೆ ಕನಿಷ್ಠ 3 ದಿನಗಳ ಮೊದಲು ಸಭೆ ಕರೆಯುವಂತೆ ನಿರ್ಣಯ ಕೈಗೊಳ್ಳಲು ಸದಸ್ಯ ಲಕ್ಷ್ಮಣ್ ಆಗ್ರಹಿಸಿದ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು.
ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡು ತೀವ್ರ ಮುಜುಗರಕ್ಕೆ ಒಳಪಡಿಸಿದರೂ ಸಹ ಬಿಜೆಪಿಯ ಒಬ್ಬನೇ ಒಬ್ಬ ಸದಸ್ಯ ಸಹ ಅಧ್ಯಕ್ಷರ ಪರವಾಗಿ ಸಮರ್ಥನೆ ಮಾಡಿಕೊಳ್ಳದಿರುವ ಬಗ್ಗೆ ಕಾಂಗ್ರೆಸ್ ನ ಸದಸ್ಯರು ಕುಹಕದ ನಗೆ ಬೀರುತ್ತಿದ್ದದ್ದು ಈ ಸಭೆಯ ವಿಶೇಷ.
ಕಾಂಗ್ರೆಸ್ ಪಕ್ಷದ 11 ಮಂದಿ ಸದಸ್ಯರು, ಬಿಜೆಪಿಯ 6 ಮಂದಿ, ಜೆಡಿಎಸ್ ಗೋಪಿ ಸೇರಿದಂತೆ ಒಟ್ಟು 18 ಮಂದಿ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ಆರಂಭವಾಯಿತು.
ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಬಿಜೆಪಿ ಸದಸ್ಯರು ಮದುವೆ ಸೇರಿದಂತೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ನಗರೋತ್ಥಾನ ಕಾಮಗಾರಿ ಆರಂಭಗೊಂಡು 3 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವವರೆಗೂ ಅವರಿಗೆ ಬಿಲ್ ಪಾವತಿಸಬಾರದು ಅಥವಾ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸದಸ್ಯ ಲಕ್ಷ್ಮಣ್ ಒತ್ತಾಯಿಸಿದರು.
14 ಕೆಸಿಕೆಎಂ 5ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಅನು ಮಧುಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲೋಕೇಶ್ ಇದ್ದರು.