ನೇತ್ರದಾನ ಮಾನವೀಯತೆಯ ಪ್ರತೀಕ

KannadaprabhaNewsNetwork |  
Published : Aug 28, 2026, 02:15 AM IST
27ಕೆಕೆಆರ್1:ಕೊಪ್ಪಳ ನಗರದ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದರಾಷ್ಟ್ರೀಯ ನೇತ್ರದಾನ ಜಾಗೃತಿಯ  ಸಭೆ ಜರುಗಿತು.  | Kannada Prabha

ಸಾರಾಂಶ

ಅಂಧತ್ವ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದೆ ಬರುವಂತೆ ಪ್ರೇರೇಪಿಸಲು ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.

ಕೊಪ್ಪಳ: ನೇತ್ರದಾನ ಸಾಮಾಜಿಕ ಕಳಕಳಿ ಮತ್ತು ಮಾನವೀಯತೆ ಪ್ರತೀಕ. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ನೇತ್ರದಾನ ಜಾಗೃತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೇತ್ರದಾನ ಕೇವಲ ವೈದ್ಯಕೀಯ ಪ್ರಕ್ರಿಯೆಯಲ್ಲ, ಅದೊಂದು ಸಾಮಾಜಿಕ ಕಳಕಳಿ ಮತ್ತು ಮಾನವೀಯತೆಯ ಜವಾಬ್ದಾರಿಯಾಗಿದ್ದು, 41ನೇ ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕದ ಸಂದರ್ಭದಲ್ಲಿ ನೇತ್ರದಾನದ ಬಗ್ಗೆ ವಿಶೇಷ ಅರಿವು ಮೂಡಿಸಬೇಕು. ಸಾವಿರಾರು ಜನರು ದೃಷ್ಟಿಯ ನಿರೀಕ್ಷೆಯಲ್ಲಿದ್ದು, ಲಭ್ಯವಿರುವ ದಾನಿಗಳ ಸಂಖ್ಯೆ ಅಗತ್ಯಕ್ಕಿಂತ ತೀರಾ ಕಡಿಮೆಯಿದೆ. ಹಾಗಾಗಿ ಅಂಧತ್ವ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ನೇತ್ರದಾನ ಮಾಡಲು ಮುಂದೆ ಬರುವಂತೆ ಪ್ರೇರೇಪಿಸಲು ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇದಲ್ಲದೇ ಸಾರ್ವಜನಿಕರಿಗೆ ನೇತ್ರ ತಪಾಸಣೆ ನಿಯಮಿತವಾಗಿ ಕೈಗೊಂಡು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಅಂಗಾಂಗ ದಾನದ ಬಗ್ಗೆಯೂ ಸಹ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಎಚ್.ಪ್ರಕಾಶ ಮಾತನಾಡಿ, ನೇತ್ರದಾನವು ಮಹಾದಾನ. ಈ ಬಗ್ಗೆ ಜಾಗೃತಿಗಾಗಿ ಪ್ರತಿ ವರ್ಷ ಆ.25 ರಿಂದ ಸೆ.8 ರವರೆಗೆ ರಾಷ್ಟ್ರೀಯ ನೇತ್ರದಾನ ಜಾಗೃತಿ ಪಕ್ಷಿಕ ಕಾರ್ಯಕ್ರಮ ನಡೆಯುತ್ತದೆ. ದೇಶದಲ್ಲಿ ಸದ್ಯ ಸುಮಾರು 46 ಲಕ್ಷ ಜನರು ಕಾರ್ನಿಯಲ್ ಅಂಧತ್ವದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ ಸುಮಾರು 20,000 ಹೊಸ ಕಾರ್ನಿಯಲ್ ಅಂಧತ್ವ ಪ್ರಕರಣ ಸೇರ್ಪಡೆಯಾಗುತ್ತಿವೆ. ಪ್ರತಿ ವರ್ಷ 1,00,000 ಕ್ಕೂ ಹೆಚ್ಚು ಕಾರ್ನಿಯಾ ಕಸಿ ಅಗತ್ಯವಿದ್ದರೂ ಕೇವಲ 25,000 ಕಸಿಗಳು ಮಾತ್ರ ಸಾಧ್ಯವಾಗುತ್ತಿವೆ. ಒಬ್ಬ ವ್ಯಕ್ತಿ ದಾನ ಮಾಡುವ ಒಂದು ಜೋಡಿ ಕಣ್ಣುಗಳಿಂದ ಇಬ್ಬರಿಗೆ ದೃಷ್ಟಿ ನೀಡಬಹುದು. ಭಾರತ ದೇಶಾದ್ಯಂತ ಒಟ್ಟು 5,70,316 ಕ್ಕೂ ಹೆಚ್ಚು ನಾಗರಿಕರು ಅಂಗಾಂಗ/ಅಂಗಾಂಶ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದು, ನಮ್ಮ ಕರ್ನಾಟಕ ರಾಜ್ಯವು 68,765 ನೋಂದಣಿಗಳೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಅಂಗಾಂಗ/ಅಂಗಾಂಶ ದಾನಕ್ಕೆ ಕೊಪ್ಪಳ ಜಿಲ್ಲೆಯಲ್ಲಿ 2,003 ನೋಂದಣಿಗಳಾಗಿವೆ ಎಂದರು.

ಇದೇ ಸಂದರ್ಭದಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕ ಕಾರ್ಯಕ್ರಮದ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಸವಡಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಪ್ರಕಾಶ ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗೋನಾಳ ಕುಮಾರಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತಗೌಡ ಹಿರೇಗೌಡ್ರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿ, ಕೊಪ್ಪಳ ಕಿಮ್ಸ್ ತಜ್ಞ ವೈದ್ಯರು, ವಿವಿಧ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿಯಲ್ಲಿ ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡಿವೆ; ಹುಷಾರು!
ಬೆಳಗಾವಿಯಲ್ಲೂ ಶಾಸಕರ ಭವನ: ಸ್ಪೀಕರ್‌ ಜಿ.ಎಸ್. ಪಾಟೀಲ