ಮುಳಗುಂದ: ಸರ್ಕಾರ ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡಿದೆ. ಬಡತನ ರೇಖೆಗಳಿಗಿಂತ ಕೆಳಗಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಅವರ ಕುಟುಂಬ ವರ್ಗದವರ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಿದ್ದು ಶಿಬಿರದ ಯೋಜನೆ ಪಡೆದುಕೊಳ್ಳಬೇಕು. ಕಣ್ಣು ಇಲ್ಲದವರಿಗೆ ಕಣ್ಣು ಕೊಡುವ ಕೆಲಸವನ್ನು ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಮಾಡುತ್ತಿದೆ. ಪ್ರತಿಯೊಬ್ಬರೂ ನೇತ್ರದಾನ ಮಾಡಬೇಕು ಎಂದು ಡಾ. ಎಸ್.ಸಿ. ಚವಡಿ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯಕ್ರಮದಡಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಗದಗ, ಪದ್ಮಶ್ರೀ ಪುರಸ್ಕೃತ ಡಾ. ಎಂ.ಎಂ. ಜೋಶಿ ನೇತ್ರ ಸಂಸ್ಥೆ ಹುಬ್ಬಳ್ಳಿ ಸಹಯೋಗದಲ್ಲಿ ನಡೆದ ಬೀದಿ ವ್ಯಾಪಾರಸ್ಥರಿಗೆ ಹಾಗೂ ಕುಟುಂಬ ವರ್ಗದವರಿಗೆ ಕಣ್ಣು ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ, ಸಾಮಾನ್ಯ ಆರೋಗ್ಯ ಹಾಗೂ ಚರ್ಮ ರೋಗ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜೋಶಿ ಆಸ್ಪತ್ರೆಯಲ್ಲಿ ಭಿನ್ನಭಾವ ಇಲ್ಲ. ಸಂಪೂರ್ಣ ಜವಾಬ್ದಾರಿಯಿಂದ ಚಿಕಿತ್ಸೆ ನೀಡುವ ಕೆಲಸ ಅಲ್ಲಿ ನಡೆಯುತ್ತದೆ.
ನೇತ್ರದಾನ ಶ್ರೇಷ್ಠ ದಾನ: ನಿಧನರಾದ ಮೇಲೆ ಕಣ್ಣು ಮಣ್ಣಾಲ್ಲಿ ಮಣ್ಣಾಗುತ್ತೆ. ಅದೇ ಕಣ್ಣನ್ನು ಇನ್ನೊಬ್ಬರಿಗೆ ನೀಡಿದರೆ ಅವರಿಗೆ ದೃಷ್ಟಿ ನೀಡಿದಂತಾಗುತ್ತದೆ. ಹೆಚ್ಚು, ಹೆಚ್ಚು ನೇತ್ರದಾನ ಮಾಡಲು ಜನತೆ ಮುಂದಾಗಬೇಕು. ಅಂಧರಿಗೆ ದೃಷ್ಟಿ ನೀಡುವ ಕೆಲಸ ಸಮಾಜದಲ್ಲಿ ನಡೆಯಬೇಕು ಎಂದರು.ಪಿಎಚ್‌ಸಿ ವೈದ್ಯಾಧಿಕಾರಿ ಪ್ರವೀಣ ತುಪ್ಪದ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಕುಟುಂಬದ ವರ್ಗದವರಿಗೆ ಕಣ್ಣು ತಪಾಸಣೆ, ಸಾಮಾನ್ಯ ಆರೋಗ್ಯ ಮತ್ತು ಚರ್ಮ ರೋಗ ತಪಾಸಣೆ ಶಿಬಿರವನ್ನು ಪಟ್ಟಣದಲ್ಲಿ ಆಯೋಜನೆ ಮಾಡಿದ್ದು, ಈ ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ. ಪ್ರೀತ್ ಖೋನಾ ಹಾಗೂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಮಾತನಾಡಿದರು.ನೇತ್ರ ತಜ್ಞರಾದ ಡಾ. ದಿವ್ಯಾ, ಡಾ. ಶ್ರೀನಿವಾಸ ಜೋಶಿ, ಡಾ. ನಾಗರಾಜ ಸಬರದ, ಚರ್ಮರೋಗ ತಜ್ಞೆ ಡಾ. ಸರೋಜ ಪಾಟೀಲ, ಡಾ. ಐ.ಸಿ. ಪಾಟೀಲ, ಮಲ್ಲಾರೇಪ್ಪ ಸುಲಾಖೆ, ಪಪಂ ಸದಸ್ಯರಾದ ಷಣ್ಮುಖಪ್ಪ ಬಡ್ನಿ, ಕೆ.ಎಲ್.ಕರಿಗೌಡ್ರ ಹಾಗೂ ಪಟ್ಟಣ ಮಾರಾಟ ಸಮಿತಿ ಪದಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ಇದ್ದರು.