ಮುಂಡರಗಿ: ಜೀವನದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕಣ್ಣು ಅತ್ಯಂತ ಮುಖ್ಯ ಅಂಗ. ಈ ಜಗತ್ತಿನ ಎಲ್ಲ ಸೌಂದರ್ಯವನ್ನು ನೋಡುವುದು ಕಣ್ಣಿನಿಂದ ಮಾತ್ರ ಸಾಧ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.ಅವರು ಗುರುವಾರ ಪಟ್ಟಣದಲ್ಲಿ ಅಶ್ವಿನಿ ಕ್ಲಿನಿಕ್, ವಿ.ಸಿ. ಹಂಚಿನಾಳ ಮೆಮೋರಿಯಲ್ ಟ್ರಸ್ಟ್ ಮುಂಡರಗಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಮತ್ತು ಎಂ.ಎಂ. ಜೋಶಿ ನೇತ್ರವಿಜ್ಞಾನ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಯಸ್ಸಾದಂತೆ ಕಣ್ಣಿಗೆ ಪೊರೆ ಬರುತ್ತದೆ ಮತ್ತು ಬಿಪಿ ಹಾಗೂ ಸಕ್ಕರೆ ಕಾಯಿಲೆ ಇದ್ದರೂ ಸಹ ಕಣ್ಣಿನ ಹೆಚ್ಚಿನ ತೊಂದರೆಯಾಗುತ್ತದೆ. ಕಣ್ಣಿಗೆ ಪೊರೆ ಬಂದರೆ ತಕ್ಷಣವೇ ತೆಗಿಸಬೇಕು. ಬಿಪಿ ಹಾಗೂ ಸಕ್ಕರೆ ಕಾಯಿಲೆ ಇದ್ದರೆ ಅದು ಕಣ್ಣಿನ ದೃಷ್ಟಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ತಕ್ಷಣವೇ ವೈದ್ಯರನ್ನುಸಂಪರ್ಕಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಹಾಗೇ ಬಿಟ್ಟರೆ ಅವು ಕಣ್ಣಿನ ನರವನ್ನು ಕ್ಷೀಣಿಸುತ್ತಾ ಹೋಗುತ್ತವೆ. ಇದರಿಂದ ಶಾಶ್ವತ ಅಂದತ್ವ ಬರಬಹುದು.ಸರ್ಕಾರ ಬಿಪಿ, ಸುಗರ್ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಎನ್.ಸಿ.ಡಿ.ಕ್ಲಿನಿಕ್ ತೆರೆದಿದ್ದು, ಅಲ್ಲಿಗೆ ತೆರಳಿ ಬಿಪಿ ಹಾಗೂ ಸಕ್ಕರೆ ಖಾಯಿಲೆ ಇರುವ ಬಗ್ಗೆ ತಪಾಸಣೆ ಮಾಡಿಸಿ ಇದ್ದರೆ ಅವರು ನೀಡುವ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗುವ ಮೂಲಕ ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವಿ.ಸಿ. ಹಂಚಿನಾಳ ಅವರ ಹೆಸರಿನಿಂದ ಮಾಡುತ್ತಿರುವ ಈ ಕಾರ್ಯಕ್ರಮ ಇದೊಂದು ಮಾದರೀಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಶಂಕರ ಕುಕುನೂರ ಹಾಗೂ ಸುನಂದಾದೇವಿ ಹಂಚಿನಾಳ, ಶಶಿಕಲಾ ಕುಕನೂರ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ಎಸ್. ಕರಿಭರಮಗೌಡರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗೈಕ ವಿ.ಸಿ. ಹಂಚಿನಾಳ ಅವರು ಒಬ್ಬ ವಿದ್ಯಾರ್ಥಿಗಳ ನೆಚ್ಚಿನ ಆದರ್ಶ ಶಿಕ್ಷಕರಾಗಿದ್ದರು. ಶಿಕ್ಷಣದ ಜತೆಗೆ ಶಿಕ್ಷಕರ ಹಾಗೂ ನೌಕರರ ಮತ್ತು ನಿವೃತ್ತ ನೌಕರರ ಸಂಘಟನೆ ಹೀಗೆ ಎಲ್ಲ ರಂಗಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು 35 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಅವರ ನೆನಪಿನಲ್ಲಿ ಕುಟುಂಬ ವರ್ಗದವರು ಅಂಧತ್ವ ನಿವಾರಣೆಯಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದುದು. ಮುಂಬರುವ ದಿನಗಳಲ್ಲಿ ಅವರ ಹೆಸರಿನಲ್ಲಿ ಸಂಸ್ಕರಣಾ ಗ್ರಂಥವನ್ನು ಹೊರತರೋಣ. ಅದಕ್ಕೆ ಕುಟುಂಬಸ್ಥರು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಿ.ಸಿ. ಹಂಚಿನಾಳ ಮೆಮೊರಿಯಲ್ ಟ್ರಸ್ಟ್ ಅಧ್ಯಕ್ಷ ದೇವಪ್ಪ ಕುಕನೂರ, ಡಾ. ಜಗದೀಶ ಹಂಚಿನಾಳ, ಡಾ. ನಂದಿತಾ ಹಂಚಿನಾಳ, ನಾಗೇಶ ಹುಬ್ಬಳ್ಳಿ, ಡಾ. ನಾಗಭೂಷಣ ಬಗರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಶಿಕಲಾ ಕುಕನೂರ ಸ್ವಾಗತಿಸಿದರು. ಡಾ.ಸಿ.ಸಿ. ವಾಚದಮಠ ನಿರೂಪಿಸಿ, ವಂದಿಸಿದರು.