- ಸ್ಪರ್ಧಾತ್ಮಕ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು 22 ವರ್ಷದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆದರೆ 25 ವರ್ಷ ವಯೋಮಾನದ ಅವಧಿಯಲ್ಲಿ ಸರ್ಕಾರಿ ವಿವಿಧ ಹುದ್ದೆಗಳಲ್ಲಿ ಉದ್ಯೋಗ ಪಡೆಯಲು ಸಹಕಾರಿ ಯಾಗಲಿದೆ ಎಂದು ಧಾರವಾಡದ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ವೈ.ಎಚ್. ಗೌಡರ್ ಹೇಳಿದರು.
ಸಹ್ಯಾದ್ರಿ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಇದು ಹೋದಾಗ ಮಾತ್ರ ಪರೀಕ್ಷೆಯನ್ನು ಸಮಗ್ರವಾಗಿ ಎದುರಿಸಿ ಐಎಎಸ್, ಕೆಎಎಸ್, ತಹಸೀಲ್ದಾರ್ ಸೇರಿ ದಂತೆ ಉನ್ನತ ಹುದ್ದೆಗಳಿಗೆ ನೇಮಕವಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.ವಿದ್ಯಾರ್ಥಿಗಳು 18 ರಿಂದ 20 ವರ್ಷದ ಒಳಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದ ಉನ್ನತ ಹುದ್ದೆಗಳಿಗೆ ಹೋಗಬಹುದಾಗಿದೆ. ಉತ್ತರ ಪ್ರದೇಶದ ಬಡ ರೈತ ಕುಟುಂಬದ ವಿದ್ಯಾರ್ಥಿಯೊಬ್ಬ ತನ್ನ ತಂದೆ. ತಾಯಿಯೊಂದಿಗೆ ಜಮೀನು ಕೆಲಸ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಐಎಎಸ್ ಪಾಸಾಗಿ ಸಾಧನೆ ಮಾಡಿದ್ದಾನೆ ಎಂದು ಉದಾಹರಿಸಿದರು.ಸ್ಪರ್ಧಾತ್ಮಕ ಪರೀಕ್ಷೆಗಳು ಅಷ್ಟೇನು ಕಷ್ಟಕರವಲ್ಲ, ಆದರೆ, ಉತ್ತಮ ಮಾರ್ಗದರ್ಶನ, ತರಬೇತಿ ಪಡೆದಾಗ ಸರ್ಕಾರದ ಪರೀಕ್ಷಾ ಪ್ರಾಧಿಕಾರಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸ ಬಹುದಾಗಿದೆ ಎಂದು ತಿಳಿಸಿದರು.ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಉಲ್ಲಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಬಹಳ ದಿನಗಳ ಕನಸು ಇಂದು ಈಡೇರಿದೆ ಎಂದು ಹೇಳಿದರು.ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದರೆ ಗ್ರಾಪಂ, ತಾಪಂ, ಜಿಪಂ ವ್ಯಾಪ್ತಿಯ ಇಲಾಖೆಗಳಲ್ಲಿ ಬಹು ಸುಲಭವಾಗಿ ಉದ್ಯೋಗ ಪಡೆದುಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.ದಿನೇ ದಿನೇ ಹೊಸ ಹೊಸ ಆವಿಷ್ಕಾರಗಳು ಬೆಳೆಯುತ್ತಿರುವುದರಿಂದ ಜೀವನದಲ್ಲಿ ಒಂದು ರೀತಿ ಸ್ಪರ್ಧೆ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಬಯಸು ವುದಾದರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುವುದು ಅಗತ್ಯ ಎಂದರು.ಸರ್ಕಾರಿ ಉದ್ಯೋಗ ಅವಕಾಶಗಳು ಕೇವಲ ಕಲಾ, ವಿಜ್ಞಾನ ವಿಭಾಗಕ್ಕೆ ಸೀಮಿತವಾಗದೇ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೂ ವಿವಿಧ ಹುದ್ದೆಗಳು ದೊರೆಯುವಂತಾಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿನಿ ಬಿ.ಎಸ್. ಬಿಂದು ಸ್ವಾಗತಿಸಿ, ಎಚ್.ಜೆ. ಅನನ್ಯ ವಂದಿಸಿದರು.13 ಕೆಸಿಕೆಎಂ 2ಚಿಕ್ಕಮಗಳೂರಿನ ಸಹ್ಯಾದ್ರಿ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ತರಬೇತುದಾರ ವೈ.ಎಚ್. ಗೌಡರ್ ಉದ್ಘಾಟಿಸಿದರು. ಉಲ್ಲಾಸ್ ಇದ್ದರು.