ಮುಂಡರಗಿ: ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಪ್ರತಿ ವರ್ಷವೂ ಅತಿಥಿ ಶಿಕ್ಷಕರ ನೇಮಕ ಮಾಡಿ ಕೈ ತೊಳೆದುಕೊಳ್ಳುವುದನ್ನು ಬಿಟ್ಟು ಕಾಯಂ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಅನುಕೂಲ ಮಾಡಿಕೊಡಬೇಕು ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ್ ಹುಬ್ಬಳ್ಳಿ ಹೇಳಿದರು.
ಎಲ್ಲೆಡೆ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯಕ್ಕಾಗಿ ತಕ್ಷಣವೇ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರಸ್ತುತ ವರ್ಷದಿಂದ ಎಸ್.ಎಂ. ಭೂಮರೆಡ್ಡಿ ಶಾಲೆಯಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿದೆ. ಪಾಲಕರು ಅದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರ ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಇತರೆ ಕೆಲಸದ ಹೊರೆಯನ್ನು ಹಾಕುತ್ತಿದ್ದು, ಅವರಿಗೆ ಕೇವಲ ಪಾಠ ಬೋಧನೆಗೆ ಹಚ್ಚಬೇಕು ಅಂದಾಗ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು.
ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ಮಾತನಾಡಿ, ಇಂದು ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ, ಆಯಾ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವಗಳು ಜರುಗುತ್ತಿದ್ದು, ಮಕ್ಕಳನ್ನು ಹೆಚ್ಚೆಚ್ಚು ಸರ್ಕಾರಿ ಶಾಲೆಗಳತ್ತ ಬರ ಮಾಡಿಕೊಳ್ಳುವ ಮೂಲ ಉದ್ದೇಶದಿಂದ ಈ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಇವತ್ತು ಶಿಕ್ಷಣದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು ಪಾಲಕರು ಸ್ವಯಂ ಪ್ರೇರಣೆಯಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಓದಿರುವಂತಹ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂ ಕ್ ಪಡೆಯುತ್ತಿದ್ದಾರೆ. ಇದು ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ಮಕ್ಕಳಿಗೆ ಹೆಮ್ಮೆಯ ಸಂಗತಿಯಾಗಿದೆ. ಶಾಸಕ ಡಾ. ಚಂದ್ರು ಲಮಾಣಿ ಅವರ ಮೂಲಕ ಶಾಲೆಗೆ ಬೇಕಾದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶಿ, ಭೂ ದಾನಿ ರಮೇಶ ಭೂಮರೆಡ್ಡಿ, ವಿಜಯಕುಮಾರ ಶಿಳ್ಳಿನ, ವಿರುಪಾಕ್ಷಿ ಬಾರಕೆರ, ಪರಶುರಾಮ ಡಂಬಳ, ಈರಣ್ಣ ಮಡಿವಾಳರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿಆರ್‌ಪಿ ಹೊಳೆಯಮ್ಮನವರ್ ಸ್ವಾಗತಿಸಿದರು. ಬಿಆರ್‌ಸಿ ಸಮನ್ವಯ ಅಧಿಕಾರಿ ಗಂಗಾಧರ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಂ.ಪಿ. ಶೀರನಹಳ್ಳಿ ನಿರೂಪಿಸಿದರು.