ಗದಗ: ಕಳೆದ ಸೆಪ್ಟೆಂಬರ್ ೩೦ರಂದು ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು ೯೨೧ ಅಹವಾಲುಗಳ ಸ್ವೀಕೃತವಾಗಿದ್ದವು. ಈ ಪೈಕಿ ಶೇ. ೮೨.೪ರಷ್ಟು ಅಹವಾಲುಗಳನ್ನು ವಿಲೇ ಮಾಡುವ ಮೂಲಕ ಪ್ರಗತಿ ಸಾಧನೆಯಾಗಿದೆ. ಬಾಕಿ ಇರುವ ೧೬೨ ಅಹವಾಲುಗಳಿಗೆ ಶೀಘ್ರವೇ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೂಚಿಸಿದರು.
ಇಲಾಖಾವಾರು ಜನತಾ ದರ್ಶನದಲ್ಲಿ ಸ್ವೀಕೃತವಾದ ಅಹವಾಲುಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಸಾರ್ವಜನಿಕರಿಗೆ ಸರ್ಕಾರದಿಂದ ಸಹಾಯ ಧನ, ಸೌಲಭ್ಯಗಳು ಸರಿಯಾಗಿ ತಲುಪಬೇಕು. ಜನತಾ ದರ್ಶನ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ಸರಕಾರಿ ಸೇವೆಗಳು ಕಾಲಮಿತಿಯೊಳಗೆ ದೊರಕುವಂತಾಗಬೇಕು ಎಂದು ತಿಳಿಸಿದರು.
ಬಾಕಿ ಇರುವ ಅಹವಾಲುಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ಸಾಧ್ಯವಾಗದಿದ್ದಲ್ಲಿ ರಾಜ್ಯ ಮಟ್ಟದ ಇಲಾಖಾ ಮುಖ್ಯಸ್ಥರಿಗೆ ಅಗತ್ಯದ ಪ್ರಸ್ತಾವನೆಗಳನ್ನು ಸಲ್ಲಿಸಿ ಅದರ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದರು.ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು ಅದರೊಳಗಾಗಿಯೇ ಕಳೆದ ಬಾರಿಯ ಜನತಾದರ್ಶನದಲ್ಲಿ ಸ್ವೀಕೃತವಾದಂತಹ ಅಹವಾಲುಗಳ ಪೈಕಿ ಬಾಕಿ ಇರುವ ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ತಿಳಿಸಿದರು.
ಇದಕ್ಕೂ ಮುನ್ನ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಪ್ರತಿ ಅರ್ಹರಿಗೂ ತಲುಪಲೇ ಬೇಕು. ಶೇ.೧೦೦ರಷ್ಟು ಗುರಿ ಸಾಧನೆಯನ್ನು ಅಧಿಕಾರಿ ವರ್ಗ ನಿರ್ವಹಿಸಲೇ ಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಪಂಚಗ್ಯಾರಂಟಿಗಳ ಸೌಲಭ್ಯ ಅರ್ಹ ಪ್ರತಿಯೊಬ್ಬರಿಗೂ ಸುಲಭವಾಗಿ ದೊರಕಬೇಕು ಎಂದರು.
ಗೃಹ ಲಕ್ಷ್ಮೀ ಯೋಜನೆಯಡಿ ೪೭೫ ಫಲಾನುಭವಿಗಳಿಗೆ ಮಂಜೂರಾತಿ ನೀಡುವುದು ಬಾಕಿ ಇದ್ದು, ಈ ಪೈಕಿ ೩೮೪ ಫಲಾನುಭವಿಗಳು ಆದಾಯ ತೆರಿಗೆ ಸಲ್ಲಿಸುವವರಾಗಿರುತ್ತಾರೆ ಹಾಗೂ ೩೮ ಫಲಾನುಭವಿಗಳು ಮೃತರಾಗಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಮಾಹಿತಿ ಒದಗಿಸಿದರು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ ೧.೪೧ ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಯೋಜನೆ ಆರಂಭದಿಂದ ಜ. ೧೭ರ ವರೆಗೆ ೧೦೦ ಕೋಟಿಗೂ ಅಧಿಕ ಪ್ರಯಾಣಿಕರು ಶಕ್ತಿ ಯೋಜನೆ ಪ್ರಯೋಜನೆ ಪಡೆದಿರುತ್ತಾರೆ. ೪೩.೩೦ ಲಕ್ಷ ರು. ಸರಾಸರಿ ಪ್ರತಿದಿನದ ಆದಾಯವಾಗಿದೆ ಎಂದು ಗದಗ ವಿಭಾಗೀಯ ಸಾರಿಗೆ ನಿಯಂತ್ರಕರು ಹೇಳಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು, ಗ್ಯಾರಂಟಿ ಯೋಜನೆಗಳು ಶೇ. ೧೦೦ ರಷ್ಟು ಪ್ರಗತಿಯಾಗಬೇಕು. ಪ್ರಗತಿಯಾಗದೇ ಇರುವುದಕ್ಕೆ ಕಾರಣವೇನು? ಹಾಗೂ ಶೇ. ೧೦೦ರಷ್ಟು ಪ್ರಗತಿ ಹೊಂದಲು ಏನು ಕ್ರಮ ವಹಿಸಬೇಕೆಂಬುದರ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳು ಗಮನ ಹರಿಸಬೇಕು ಎಂದರು.