- ಹರ ಸೇವಾ ಸಂಸ್ಥೆ, ಪಂಚಮಸಾಲಿ ಸಮಾಜದ 23ನೇ ವರ್ಷದ ಕಾರ್ಯಕ್ರಮ: ಉಮಾಪತಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಹರ ಸೇವಾ ಸಂಸ್ಥೆ, ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಹಯೋಗದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಆ.2ರಂದು ನಗರದ ಶಾಬನೂರು ರಸ್ತೆಯ ಬಾಪೂಜಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಬಿ.ಸಿ.ಉಮಾಪತಿ ಅಧ್ಯಕ್ಷತೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಎಂ. ಶಾಮನೂರು ಸಮಾರಂಭ ಉದ್ಘಾಟಿಸುವರು. ನಿವೃತ್ತ ಪ್ರಾಚಾರ್ಯ ದವನ ಕಾಲೇಜು ನಿರ್ದೇಶಕ ಪ್ರೊ.ಬಾತಿ ಬಸವರಾಜ್ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.85ರಷ್ಟು ಅಂಕ ಪಡೆದ 72 ಮಕ್ಕಳು, ದ್ವಿತೀಯ ಪಿಯುಸಿ ಸಾಧಕರಾದ 64 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.ಉದ್ಯಮಿಗಳಾದ ಎಸ್.ಕೆ. ಶ್ರೀಧರ, ಕಂಚಿಕೇರಿ ಮಹೇಶ, ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ ಇತರರು ಭಾಗವಹಿಸುವರು. ಸಮಾಜದ ಸಾಧಕರಾದ ವರ್ತಕ ಸವಣೂರು ಚಂದ್ರಶೇಖರ, ವಕೀಲ ಮಲ್ಲಿಕಾರ್ಜುನ್ ಕಣವಿ, ಮಲ್ಲಿಕಾರ್ಜುನ್ ಬೆನ್ನೂರು, ಬಿ. ರಾಜಶೇಖರ್, ಎನ್.ಕೆ. ಜಯರಾಜ ಮೇಟಿ, ಷಣ್ಮುಖಪ್ಪ ಹುನಗುಂದ, ಪ್ರಗತಿಪರ ರೈತರಾದ ಎಂ.ಬಿ. ಮುದ್ದಪ್ಪ, ಲಲಿತಮ್ಮ ಜಯಪ್ಪ, ಧಜಂಜಯ ಗುಡ್ಡಪ್ಪ, ಚಂದ್ರಶೇಖರ್ ಅಂಗಡಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಯುವ ಉದ್ಯಮಿಗಳಾದ ಮಂಡಲೂರು ಮಹೇಂದ್ರಕುಮಾರ, ಮತ್ತಿಹಳ್ಳಿ ಸಂತೋಷ ಕುಮಾರ, ಬಾದಾಮಿ ಆಕಾಶ, ಕೆ.ಮಹಾಲಿಂಗೇಶ ಕೆ. ತಿಪ್ಪಣ್ಣ, ಬಾದಾಮಿ ಮುರುಗೇಶ, ಚಂದನ್ ಪಲ್ಲಾಗಟ್ಟೆ, ಬಿ.ರಮೇಶ, ಅಂದನೂರು ಆರ್. ಚಂದ್ರಶೇಖರ್, ಸಿ.ಎಸ್.ವಿಕಾಸ್, ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಡಾ.ಎಂ.ಸಿ. ಗುರು, ಡಾ.ಎಂ.ಸುರೇಂದ್ರ, ಪೃಥ್ವಿರಾಜ್ ಆರ್. ಬಾದಾಮಿ, ಅಮರಪ್ಪ ಗಂಗನಗೌಡರ, ಡಾ.ಪೂಜಾ ಮುದೇನೂರು, ಕ್ರೀಡಾ ಮತ್ತು ಕಲಾ ಕ್ಷೇತ್ರದ ಸಾಧಕರಾದ ಅಶ್ವಿಕಾ ಐನಳ್ಳಿ, ಡಾ.ವಿದ್ಯಾ ರಮೇಶ, ವೈಭವ್ ಪಾಟೀಲ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಹರ ಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ 23 ವರ್ಷದಿಂದಲೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳುತ್ತಾ ಬಂದಿದೆ. ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸ ಇದಾಗಿದೆ. ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಪ್ರತಿವರ್ಷ ಸಮಾರಂಭ ಹಮ್ಮಿಕೊಂಡು ಬಂದಿದ್ದೇವೆ ಎಂದು ಬಿ.ಸಿ.ಉಮಾಪತಿ ತಿಳಿಸಿದರು.
ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಕಾಶಿನಾಥ, ಉಪಾಧ್ಯಕ್ಷರಾದ ಎಂ.ದೊಡ್ಡಪ್ಪ, ಅಂದನೂರು ಮುರುಗೇಶಪ್ಪ, ಎಚ್.ಎಂ.ನಾಗರಾಜ, ಅವಣೆಪ್ಪ, ಲಿಂಗರಾಜ ಇತರರು ಇದ್ದರು.- - -
(ಬಾಕ್ಸ್) * ಪೀಠದ ವಿವಾದ: ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೂಚಿಸಿದ್ದು, ಎಲ್ಲದಕ್ಕೂ ಮುಂದೆ ಕಾಲವೇ ಉತ್ತರ ಕೊಡಲಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ, ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠದ ವಿಚಾರದಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದನ್ನು ಜನರೂ ಗಮನಿಸುತ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ. ನಾವು ಯಾವುದೇ ಪ್ರತಿಕ್ರಿಯೆ ನೀಡುವುದೂ ಇಲ್ಲ ಎಂದರು.
ಸಮಾಜದಿಂದ ಪ್ರತಿಭಾ ಪುರಸ್ಕಾರ ನೀಡುವ ಸಮಾರಂಭವನ್ನು ಹರಿಹರ ಪೀಠ ಸ್ಥಾಪನೆ, ಪೀಠದ ಶ್ರೀಗಳ ಆಯ್ಕೆಗೂ ಮುಂಚೆಯಿಂದಲೂ ಇದೆ. ಇದು ಪಂಚಮಸಾಲಿ ಸಮಾಜ ಹಾಗೂ ಹರ ಸಂಸ್ಥೆ ಜೊತೆಯಾಗಿ ಮಾಡಿಕೊಂಡು ಬಂದ ಕಾರ್ಯಕ್ರಮ. ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ, ಗುರುತಿಸುವ ಕಾರ್ಯ ಇದಾಗಿದೆ ಎಂದು ಅವರು ತಿಳಿಸಿದರು.- - -
-30ಕೆಡಿವಿಜಿ2: ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.