ಕನ್ನಡಪ್ರಭ ವಾರ್ತೆ ನಂಜನಗೂಡು
ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗಮಾನದಲ್ಲಿ ಶಿಕ್ಷಣದ ಪರಿಕಲ್ಪನೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅಧ್ಯಾಪಕ ವೃತ್ತಿ ಹೆಚ್ಚು ಮಹತ್ವವನ್ನು ಹೊಂದಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು.ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ಕಾಲೇಜುಗಳ ಅಧ್ಯಾಪಕರಿಗಾಗಿ ಬುಧವಾರ ಆಯೋಜಿಸಿದ್ದ ಉನ್ನತ ಶಿಕ್ಷಣದಲ್ಲಿ ಬೋಧನಾ ಗುಣಮಟ್ಟದ ವರ್ಧನೆ ಮತ್ತು ವೃತ್ತಿಪರ ನೀತಿಶಾಸ್ತ್ರ ಎಂಬ ವಿಷಯ ಕುರಿತ ಒಂದು ದಿನದ ಪ್ರಾಂತೀಯ ಮಟ್ಟದ ಅಧ್ಯಾಪಕರ ಪುಷ್ಠೀಕರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಾಪಕ ವೃತ್ತಿ ಕೇವಲ ಪಠ್ಯಾಧಾರಿತ ವೃತ್ತಿಯಾಗದೆ ವಿಶೇಷವಾಗಿ ಕೃತಕ ಬುದ್ದಿಮತ್ತೆಯ ಯುಗದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಲಿಕೆಯೊಂದಿಗೆ ವೈಜ್ಞಾನಿಕ ದೃಷ್ಟಿಯಿಂದ ಕೌಶಲ್ಯದ ಕಲಿಕೆಯ ಮುನ್ನೆಲೆಗೆ ಬರುವಂತೆ ಪೂರಕ ಮತ್ತು ಯೋಜಿತವಾದ ಬೋಧನೆ ಮಾಡುವಲ್ಲಿ ಪ್ರಯತ್ನಶೀಲರಾಗಬೇಕು ಎಂದು ಸ್ವಾಮಿ ವಿವೇಕಾನಂದರು ಮತ್ತು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಯೋಜಿತ ಅನುಭಾವಾಧಾರಿತ ಬದುಕಿನ ನಿದರ್ಶನಗಳನ್ನು ನೀಡಿದರು. ಮನುಷ್ಯ ಮನುಷ್ಯರನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅಧ್ಯಾಪಕರು ವಿದ್ಯಾರ್ಥಿಗಳ ಕಲಿಕಾ ಅಗತ್ಯತೆಯನ್ನು ಅರ್ಥ ಮಾಡಿಕೊಂಡು ಸೇವೆ ಸಲ್ಲಿಸುವುದರೊಂದಿಗೆ ಶಿಸ್ತು, ಸಮಯ ಪ್ರಜ್ಞೆ ಹಾಗೂ ಸೇವಾ ಬದ್ಧತೆಯಿಂದ ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರೊಂದಿಗೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ದ್ಯೇಯೋದ್ದೇಶವನ್ನು ಸಮೀಕರಿಸಿ ವಿದ್ಯಾರ್ಥಿಗಳ ಹಿತಾಸಕ್ತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂಜನಗೂಡಿನ ಪ್ರಥಮ ದರ್ಜೆ ಗುತ್ತಿಗೆದಾರ ಯು,ಎನ್. ಪದ್ಯನಾಭ ರಾವ್, ಕಾಲೇಜಿನಲ್ಲಿ ಆಯೋಜಿಸಿರುವ ಒಂದು ದಿನದ ಅಧ್ಯಾಪಕರ ಕಾರ್ಯಗಾರದ ಯಶಸ್ಸಿಗೆ ಶುಭ ಕೋರಿದರು.
ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಅಧ್ಯಾಪಕರಿಗಾಗಿ ಆಯೋಜಿಸಿರುವ ಉನ್ನತ ಶಿಕ್ಷಣದಲ್ಲಿ ಬೋಧನಾಗುಣಮಟ್ಟದ ವರ್ಧನೆ ಮತ್ತು ವೃತ್ತಿಪರ ನೀತಿಶಾಸ್ತ್ರ ವಿಷಯ ಕುರಿತಾದ ಕಾರ್ಯಗಾರ ಅಧ್ಯಾಪಕರಲ್ಲಿ ಸಕ್ರಿಯ ಕಲಿಕೆ, ನಿರಂತರ ತರಬೇತಿ, ಸಾಂಸ್ಥಿಕ ಹೊಣೆಗಾರಿಕೆ ಹಾಗೂ ಸಾಮಾಜಿಕ ಬದ್ಧತೆಯ ಪರಿಕಲ್ಪನೆಯನ್ನು ಉತೃಷ್ಟಗೊಳಿಸಿ ದೇಶದ ಸಮಗ್ರತೆ ಹಾಗೂ ಐಕ್ಯತೆಯನ್ನು ಗೌರವಿಸಿ ವಿದ್ಯಾರ್ಥಿಗಳ ಕ್ಷೇಮವನ್ನು ಪರಿಗಣಿಸಿ ಸೇವೆ ಸಲ್ಲಿಸಲು ಈ ಕಾರ್ಯಕ್ರಮ ಮಾರ್ಗದರ್ಶಿ ಆಗಲಿದೆ ಎಂದು ಆಶಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ.ಡಿ.ಎಸ್. ಪ್ರತಿಮಾ ಮಾತನಾಡಿ, ನಂಜನಗೂಡು ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ತನ್ನದೇ ಆದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪರಂಪರೆಯ ಶ್ರೇಷ್ಠತೆ ಮತ್ತು ಇತಿಹಾಸವನ್ನು ಹೊಂದಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.
ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ.ಎನ್. ಸೌಮ್ಯಾ ಪ್ರಾರ್ಥಿಸಿದರು. ಸಂಯೋಜಕಿ ಎಂ.ಎಸ್. ದೀಪಾಲಿ ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ಜಿ.ಎಂ. ಶ್ವೇತಾ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಎಂ.ಎನ್. ಜಯಶೀಲ ನಿರೂಪಿಸಿದರು.