- ದೇವಿ ಆಭರಣ ಕದ್ದವನ ವಿರುದ್ಧ ದೂರು ದಾಖಲಾಗಿದೆ । ದಸರಾ ಸಭೆಯಲ್ಲೇ ಯಶವಂತ ರಾವ್ ಸೇರಿ ಎಲ್ಲರಿಗೂ ಲೆಕ್ಕ ಕೊಡ್ತೀವಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ 6 ಚಿನ್ನಾಭರಣ ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಲೆಕ್ಕಪತ್ರದ ಬಗ್ಗೆ ದಸರಾ ಸಭೆಯಲ್ಲೇ ಪರಿಶೀಲಿಸಬಹುದಾಗಿದ್ದು, ದೇವಸ್ಥಾನದ ಬಗ್ಗೆ ಅಪಪ್ರಚಾರ, ಸುಳ್ಳು ವದಂತಿ ಹರಡಬೇಡಿ ಎಂದು ದೇವಸ್ಥಾನ ಟ್ರಸ್ಟ್‌ನ ಪ್ರಭಾರ ಕಾರ್ಯದರ್ಶಿ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್‌ಗೆ ತಾಕೀತು ಮಾಡಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಗ್ಗಮ್ಮ ಗುಡಿಯ ಆಭರಣಗಳನ್ನು ದೇವಸ್ಥಾನದ ಪೂಜಾರಿ ಕುಟುಂಬದ ಆಕಾಶ ಎಂಬಾತ ಕಳವು ಮಾಡಿದ್ದು, 6 ತಿಂಗಳಿಗೊಮ್ಮೆ ಪೂಜೆ ಮತ್ತೊಂದು ಪೂಜಾರರ ಕುಟುಂಬಕ್ಕೆ ಹಸ್ತಾಂತರವಾಗುವ ವೇಳೆ ದೇವಿಗೆ ಸೇರಿದ 6 ಚಿನ್ನಾಭರಣ ಕಳುವಾದ ವಿಚಾರ ಹೊರಬಂದಿದೆ. ದೇವಿ ಚಿನ್ನಾಭರಣ ಕದ್ದ ಪೂಜಾರಿ ಹಾಗೂ ಅದನ್ನು ಖರೀದಿಸಿದವನನ್ನು ಕರೆಸಿ, ಟ್ರಸ್ಟ್ ಕಾರ್ಯಾಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಟ್ರಸ್ಟಿಗಳು ಬಿಗಿ ಮಾಡಿದ್ದೇವೆ ಎಂದರು.
ದೇವಿಗೆ ಸೇರಿದ 32 ಐಟಂಗಳ ಪೈಕಿ 6 ಆಭರಣಗಳು ಕಳವಾಗಿವೆ. 1 ಕಾಸಿನ ಸರ, 59 ಬಿಲ್ಲೆಯ 2 ಬೇವಿನ ಸರ, ನೆಲ್ಲಿಕಾಯಿ ಸರ, ಎರಡು ಕಣ್ಣುಗಳು, 2 ತಾಳಿ ಗುಂಡುಗಳು ಸೇರಿದಂತೆ 6 ಒಡವೆ ಕಳವಾಗಿವೆ. ದುಗ್ಗಮ್ಮನ ಗುಡಿಗೆ 4 ಪೂಜಾರರ ಕುಟುಂಬಗಳಿವೆ. ಈ ಪೈಕಿ ಹೊನ್ನಪ್ಪ ಪೂಜಾರ ಎಂಬವರ ಅಣ್ಣನ ಮಗ ಆಕಾಶ ದೇವಿ ಆಭರಣಗಳ ಕಳವು ಮಾಡಿದ್ದ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಭಕ್ತರು ಹರಕೆ, ಕಾಣಿಕೆ ರೂಪದಲ್ಲಿ ಮೂಗುಬೊಟ್ಟು (ಮೂಗುತಿ), ಕಿವಿಯೋಲೆ, ಸರ ಅಂತೆಲ್ಲಾ ನೀಡುತ್ತಾರೆ. ಹಿಂದಿನಿಂದಲೂ ದೇವಸ್ಥಾನದಲ್ಲಿ ಆಭರಣಗಳ ನೈಜತೆ ಹಾಗೂ ಗುಣಮಟ್ಟ ಪರಿಶೀಲಿಸುವ ವ್ಯವಸ್ಥೆ ಇಲ್ಲ. ಭಕ್ತರು ನೀಡುವ ಆಭರಣ ಅಸಲಿ ಬಂಗಾರ, ಬೆಳ್ಳಿಯೋ ಅಥವಾ ಬಣ್ಣದ ನೀರು ಕುಡಿಸಿದ ಬಂಗಾರ, ಬೆಳ್ಳಿಯೋ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲ. ಇನ್ನು ಅವುಗಳ ನೈಜತೆ ಮತ್ತು ಗುಣಮಟ್ಟ ಪರಿಶೀಲಿಸುವ ಬಗ್ಗೆ ಟ್ರಸ್ಟ್ ಚರ್ಚಿಸಿ, ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಶಿವಾಲಿ ರಸ್ತೆ ಮತ್ತು ಕೊಂಡಜ್ಜಿ ರಸ್ತೆ ಪಕ್ಕ ₹3 ಕೋಟಿ ವೆಚ್ಚದಲ್ಲಿ 32 ವಾಣಿಜ್ಯ ಮಳಿಗೆ ನಿರ್ಮಿಸಿದ್ದು, ಅವುಗಳ ಗುಣಮಟ್ಟ ಕಳಪೆಯಾಗಿದೆ ಎಂದ ಯಶವಂತ ರಾವ್ ಜಾಧವ್ ಆರೋಪಿಸಿದ್ದಾರೆ. ₹50 ಲಕ್ಷ ಜಿಎಸ್‌ಟಿ ಯಾಕೆ ಕಟ್ಟಿದ್ದೀರೆಂದೂ ಪ್ರಶ್ನಿಸಿದ್ದಾರೆ. ಆಗ ಟ್ರಸ್ಟ್‌ನಿಂದ ಪರೀಕ್ಷೆಗೆ ಪ್ರತ್ಯೇಕ ಎಂಜಿನಿಯರ್ ನೇಮಿಸಿದ್ದೆವು. ಯಶವಂತ ರಾವ್ ಸಹ ಬೇರೊಬ್ಬ ಎಂಜಿನಿಯರ್ ಮೂಲಕ ಮಳಿಗೆಗಳ ಗುಣಮಟ್ಟ ಪರಿಶೀಲಿಸಲೆಂದು ತೀರ್ಮಾನಿಸಿದ್ದೆವು. ಇಬ್ಬರೂ ಎಂಜಿನಿಯರ್ ವರದಿ ಆಧರಿಸಿ, ಕಟ್ಟಡದಲ್ಲಿ ಸಣ್ಣಪುಟ್ಟ ದುರಸ್ತಿ ಸಹ ಕಟ್ಟಿದ್ದ ಎಂಜಿನಿಯರ್ ಮೂಲಕವೇ ಮಾಡಿಸಿದ್ದೆವು ಎಂದು ಅವರು ಸ್ಪಷ್ಟಪಡಿಸಿದರು.ನಮಗೆ ಕರೆದರೆ ನಾವೇ ಹೊಂಡದ ಸರ್ಕಲ್‌ಗೆ ಬರುತ್ತೇವೆ. ಯಶವಂತ ರಾವ್ ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ಹೊಂಡದ ಸರ್ಕಲ್ ಕುರುಕ್ಷೇತ್ರವಾಗುತ್ತದೆ. ಇದೇ ವ್ಯಕ್ತಿಯ ಕಚೇರಿ ಹಾಗೂ ಮನೆಯ ಮುಂದೆ ನಾವು ಹೋರಾಟ ನಡೆಸಬೇಕಾಗುತ್ತದೆ. ವಿನಾಕಾರಣ ಎಲ್ಲ ವಿಚಾರಕ್ಕೂ ಶಾಮನೂರು ಕುಟುಂಬದ ಬಗ್ಗೆ ಮಾತನಾಡುವ ಯಶವಂತ ರಾವ್ ದುಗ್ಗಮ್ಮನ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಟ್ರಸ್ಟಿಗಳಾದ ಉಮೇಶ ರಾವ್ ಸಾಳಂಕಿ, ಮುದೇಗೌಡರ ವಿಶ್ವನಾಥ, ಕಳಸಪ್ಪಪ ಗಣೇಶ, ಗುರುರಾಜ ಸೊಪ್ಪಿನ, ಶಂಕರರಾವ್ ಶಿಂಧೆ, ರಾಮಕೃಷ್ಣ ಕೃಷ್ಣಪ್ಪ ಬಡಗಿ, ಗಾಂಧಿ ನಗರ ಜಿ.ರಾಕೇಶ ಇತರರು ಇದ್ದರು.- - -
(ಬಾಕ್ಸ್-1)* ಜಿಎಸ್‌ಟಿ ಬಗ್ಗೆ ಈಗಾಗಲೇ ಸ್ಪಷ್ಟನೆ
ಟ್ರಸ್ಟ್ ಅಧ್ಯಕ್ಷರಾಗಿದ್ದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ 8.9.2022ರಂದು ನಡೆದ ಸಭೆಯಲ್ಲಿ ಎಲ್ಲ ವಿವರ ನೀಡಿದ್ದು, ಜಿಎಸ್‌ಟಿ ಕಟ್ಟಿದ್ದ ಬಗ್ಗೆ ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ ಮಾಹಿತಿ ನೀಡಿದ್ದರು. 17.7.2023ರಂದು ಶ್ರೀ ದುರ್ಗಾಂಬಿಕಾ ಶಾಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯ ಸಭೆಯಲ್ಲೂ ಅಥಣಿ ವೀರಣ್ ಜಿಎಸ್‌ಟಿ ಬಗ್ಗೆ ಸ್ಪಷ್ಟನೆ ನೀಡಿ, ವಿಷಯ ಮುಕ್ತಾಯಗೊಳಿಸಲಾಗಿತ್ತು. ಹೀಗಿದ್ದರೂ ದುಗ್ಗಮ್ಮ ದೇವಸ್ಥಾನದ ವಿಚಾರದಲ್ಲಿ ಯಶವಂತ ರಾವ್ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಎಚ್.ಬಿ. ಗೋಣೆಪ್ಪ ಆಕ್ಷೇಪಿಸಿದರು. - - -(ಬಾಕ್ಸ್-2)
* ಕಳ್ಳ ಆಕಾಶ ಪೂಜಾರಿ ಹಿಂದೆ ಯಶವಂತ ರಾವ್ ಶಂಕೆ ಹಿರಿಯ ಮುಖಂಡ ಬಿ.ಎಚ್. ವೀರಭದ್ರಪ್ಪ ಮಾತನಾಡಿ, ಮುಜರಾಯಿ ಇಲಾಖೆಗೆ ದುಗ್ಗಮ್ಮ ದೇವಸ್ಥಾನ ಹಸ್ತಾಂತರ ಆಗಬಾರದೆಂಬ ಕಾರಣಕ್ಕೆ ಟ್ರಸ್ಟ್ ರಚಿಸಿ, ಸರ್ಕಾರದ ಮೇಲೆ ಒತ್ತಡ ತಂದು ಶಾಮನೂರು ಶಿವಶಂಕರಪ್ಪ ತಡೆದಿದ್ದರು. ದುಗ್ಗಮ್ಮ ದೇವಸ್ಥಾನದ ಒಡವೆ ಕದ್ದ ಆಕಾಶ ಪೂಜಾರಿ ಎಂಬಾತ ಸಿಕ್ಕಿ ಬಿದ್ದಿದ್ದು, ಇದರ ಹಿಂದೆ ಯಶವಂತ ರಾವ್ ಇರುವ ಅನುಮಾನ ಇದೆ. ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರಿಗೆ ಯಶವಂತ ರಾವ್ ಹಗುರ ಮಾತನಾಡಿದ್ದರು. ಎಲ್ಲಾ ವಿಚಾರಕ್ಕೂ ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರು ತರುವುದು ಏಕೆ ಎಂದು ಪ್ರಶ್ನಿಸಿದರು.- - -
(ಕೋಟ್) ದಾವಣಗೆರೆ ದುಗ್ಗಮ್ಮ ದೇವಸ್ಥಾನದ ಲೆಕ್ಕಪತ್ರವನ್ನು ದಸರಾ ಸಭೆಯಲ್ಲಿ ಮಂಡಿಸುತ್ತೇವೆ. ಯಶವಂತ ರಾವ್ ಸೇರಿದಂತೆ ಯಾರಾದರೂ ಸಾರ್ವಜನಿಕರು ಬಂದು ಲೆಕ್ಕಪತ್ರ ಪರಿಶೀಲಿಸಲು ಅವಕಾಶವಿದೆ. ಲೆಕ್ಕ ಕೊಡುವುದಕ್ಕೆ ನಾವು ಸದಾ ಸಿದ್ಧರಿದ್ದೇವೆ. ದುಗ್ಗಮ್ಮನ ಗುಡಿ ಆಭರಣಗಳ ಕಳವು ಮಾಡಿದ್ದಕ್ಕೆ ನಮ್ಮ ತೀವ್ರ ವಿರೋಧವಿದೆ. ಟ್ರಸ್ಟ್‌ನಿಂದ ಏನೇ ತಪ್ಪು, ಒಪ್ಪುಗಳಾಗಿದ್ದರೂ ಅದನ್ನು ನಾವು ಸ್ವೀಕರಿಸುತ್ತೇವೆ. ಪೂಜಾರಿಗಳ ಕುಟುಂಬದ ಓರ್ವನ ಕೃತ್ಯಕ್ಕೆ ನಾವು 17 ಜನ ಟ್ರಸ್ಟಿಗಳು ತಲೆ ತಗ್ಗಿಸುವಂತಾಗಿದೆ. ಪೂಜಾರಿ ಕುಟುಂಬದ ಆರೋಪಿ ಆಕಾಶನಿಗೆ ಟ್ರಸ್ಟ್ ಸೂಕ್ತ ಶಿಕ್ಷೆ ನೀಡಲಿದೆ.- ಉಮೇಶ ರಾವ್ ಸಾಳಂಕಿ, ಟ್ರಸ್ಟಿ, ದಾವಣಗೆರೆ ದುಗ್ಗಮ್ಮ ದೇವಸ್ಥಾನ.
- - --30ಕೆಡಿವಿಜಿ1:
ದಾವಣಗೆರೆಯಲ್ಲಿ ಗುರುವಾರ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ಪ್ರಭಾರ ಕಾರ್ಯದರ್ಶಿ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.