ಫೇಕ್‌ ನ್ಯೂಸ್‌ ಪತ್ತೆಗೆ ಸರ್ಕಾರದಿಂದ ಫ್ಯಾಕ್ಟ್‌ ಚೆಕ್‌ ಏಜೆನ್ಸಿ: ಕೆ.ವಿ. ಪ್ರಭಾಕರ್

KannadaprabhaNewsNetwork | Published : Mar 1, 2025 1:00 AM

ಸಾರಾಂಶ

ಪತ್ರಿಕೋದ್ಯಮಕ್ಕೆ ಭವಿಷ್ಯ ಇಲ್ಲಪ್ಪಾ, ಬೇರೆ ಏನಾದ್ರೂ ಮಾಡೋಣ ಅಂತಿದೀನಿ ಅಂತ ನನ್ನ ಸ್ನೇಹಿತರು ಹೇಳ್ತಾನೆ ಇರ್ತಾರೆ. ನಿಜ, ಇವತ್ತು ನಾವು- ನೀವು ಅನುಭವಿಸುತ್ತಿರುವ ದಾವಂತದ, ಊಹಾ ಪತ್ರಿಕೋದ್ಯಮಕ್ಕೆ ಭವಿಷ್ಯ ಇಲ್ಲ. ಆದರೆ, ವೃತ್ತಿಪರ ಸತ್ಯ ನಿಷ್ಠ ಪತ್ರಿಕೋದ್ಯಮಕ್ಕೆ ಭವಿಷ್ಯ ಉಜ್ವಲವಾಗಿದೆ. ಸತ್ಯನಿಷ್ಠೆಯ ಪತ್ರಿಕೋದ್ಯಮಕ್ಕೆ ಸಂದರ್ಭ ಹದವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪತ್ರಿಕೋದ್ಯಮದ ಆದ್ಯತೆ ಸತ್ಯ ನಿಷ್ಠೆಯಿಂದ ಪಕ್ಷ ನಿಷ್ಠೆಗೆ ಜಾರಿ ಈಗ ವ್ಯಕ್ತಿ ನಿಷ್ಠತೆ ಕಡೆಗೆ ಜಾರುತ್ತಿದೆ. ಹೀಗಾಗಿ ವೃತ್ತಿ ನೈತಿಕತೆ ಮತ್ತು ತಂತ್ರಜ್ಞಾನದ ಸವಾಲನ್ನು ಜೀರ್ಣಿಸಿಕೊಂಡು ವೃತ್ತಿಪರತೆ ರೂಪಿಸಲು ಮಾಧ್ಯಮ ಅಕಾಡೆಮಿಯಿಂದ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮೈಸೂರು ವಿಶ್ವವಿದ್ಯಾಲಯದ ಸಹಭಾಗಿತ್ವದ ಏನ್‌ ಸಮಾಚಾರ ಮೀಡಿಯಾ ಹಬ್ಬ ಎರಡು ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿ, ಪತ್ರಿಕೋದ್ಯಮಕ್ಕೆ ಭವಿಷ್ಯ ಇಲ್ಲಪ್ಪಾ, ಬೇರೆ ಏನಾದ್ರೂ ಮಾಡೋಣ ಅಂತಿದೀನಿ ಅಂತ ನನ್ನ ಸ್ನೇಹಿತರು ಹೇಳ್ತಾನೆ ಇರ್ತಾರೆ. ನಿಜ, ಇವತ್ತು ನಾವು- ನೀವು ಅನುಭವಿಸುತ್ತಿರುವ ದಾವಂತದ, ಊಹಾ ಪತ್ರಿಕೋದ್ಯಮಕ್ಕೆ ಭವಿಷ್ಯ ಇಲ್ಲ. ಆದರೆ, ವೃತ್ತಿಪರ ಸತ್ಯ ನಿಷ್ಠ ಪತ್ರಿಕೋದ್ಯಮಕ್ಕೆ ಭವಿಷ್ಯ ಉಜ್ವಲವಾಗಿದೆ. ಸತ್ಯನಿಷ್ಠೆಯ ಪತ್ರಿಕೋದ್ಯಮಕ್ಕೆ ಸಂದರ್ಭ ಹದವಾಗಿದೆ ಎಂದರು.

ವಿದ್ಯಾರ್ಥಿಗಳು ಪತ್ರಿಕೋದ್ಯಮದ ಕೌಶಲ್ಯ, ತಂತ್ರಜ್ಞಾನ ಎಲ್ಲವನ್ನು ಕಲಿಯುವ ಜೊತೆಗೆ ಹೊಣೆಗಾರಿಕೆಯನ್ನೂ ಅರಿತುಕೊಳ್ಳುವುದು ಅತ್ಯಂತ ಅಗತ್ಯ. ಪತ್ರಿಕೋದ್ಯಮ ಹಿಂದೆ ಸೇವೆಯಾಗಿತ್ತು. ಇಂದು ಉದ್ಯಮವಾಗಿದೆ. ಹಿಂದೆ ವಸ್ತುನಿಷ್ಠತೆ ಪತ್ರಿಕೋದ್ಯಮದ ಜೀವ ಸೆಲೆ ಆಗಿತ್ತು. ಆದರೆ ಇಂದು ವ್ಯಕ್ತಿ ನಿಷ್ಠತೆ ಪಿಡುಗು ಆತಂಕಕಾರಿಯಾಗಿ ಬೆಳೆಯುತ್ತಿದೆ ಎಂದರು.

ಕಳೆದ ವಾರ ಕಲಬುರಗಿಯಲ್ಲಿ ಇದೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಗಿಂತ ಮೈಸೂರಿನ ಮಾಧ್ಯಮ ಹಬ್ಬ ಹೆಚ್ಚು ಯಶಸ್ವಿಯಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಪರಿಣಾಮಕಾರಿ ಪಾಲ್ಗೊಳ್ಳುವಿಕೆ ಪ್ರಮುಖ ಕಾರಣ ಎಂದು ಅವರು ಹೇಳಿದರು.

ಆದ್ದರಿಂದ ಜನರಿಗೆ ಸರಿಯಾದ ಮಾಹಿತಿ ನೀಡುವ ನಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಮಾಧ್ಯಮ ರಂಗದಲ್ಲಿ ನಾವು ಅಪೇಕ್ಷಿಸುವ ಬದಲಾವಣೆ ನಿಮ್ಮಿಂದಲೇ ಪ್ರಾರಂಭವಾಗಲಿ. ಸತ್ಯದ ಅನ್ವೇಷಣೆ ಹಾಗೂ ವಾಸ್ತವವನ್ನೇ ಜನರ ಮುಂದಿಡುವ ಸಂಕಲ್ಪವನ್ನು ನೀವು ಮಾಡಬೇಕು ಎಂದು ಅವರು ಕರೆ ನೀಡಿದರು.

ಎರಡು ದಿನಗಳ ಕಾರ್ಯಾಗಾರದಲ್ಲಿ ನಡೆದ ವಿವಿಧ ವಿಭಾಗಗಳ ಸ್ಫರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕೆ.ವಿ. ಪ್ರಭಾಕರ್ ಪ್ರಶಸ್ತಿ ಮತ್ತು ಪ್ರಶಸ್ತಿಪತ್ರ ವಿತರಿಸಿ ಶುಭ ಕೋರಿದರು.

ರಾಜ್ಯ ಮಾಹಿತಿ ಆಯುಕ್ತ ಕೆ. ಬದ್ರುದ್ದಿನ್‌ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಆಶಯ ಭಾಷಣ ಮಾಡಿದರು. ಪತ್ರಕರ್ತೆ ರಾಧಾ ಹಿರೇಗೌಡರ್‌, ಅಕಾಡೆಮಿ ಕಾರ್ಯದರ್ಶಿ ಎಂ. ಸಹನಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್‌. ಮಮತಾ ಇದ್ದರು.

ಅಮೃತ ವಿವಿ ಚಾಂಪಿಯನ್ಸ್:

ಏನ್ ಸಮಾಚಾರ ಮಾಧ್ಯಮ ಹಬ್ಬದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ಮೈಸೂರಿನ ಅಮೃತ ವಿದ್ಯಾಪೀಠಂ ಚಾಂಪಿಯನ್ ಆದರೆ, ಮೈಸೂರು ವಿವಿ ರನ್ನರ್ ಅಪ್ ಆಗಿದೆ.

Share this article