ಕೊಪ್ಪಳ: ಕಾರ್ಖಾನೆಗಳ ಮಾಲಿನ್ಯದ ವಿಷಯದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ. ಕಳೆದ ಎರಡು ವರ್ಷಗಳಲ್ಲಿ ಸಮಸ್ಯೆ ಬಗೆಹರಿಸಲು ತಾವು ಕೈಗೊಂಡ ಕ್ರಮಗಳನ್ನು ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಮುಕುಂದ ಸುಮಿ ಕಾರ್ಖಾನೆ ವಿಸ್ತರಣೆ ಬೇಡ ಎಂದು ಗಿಣಿಗೇರಿ ಜನ ಪ್ರತಿಭಟಿಸಿದರೂ ನೀವು ಸುಮ್ಮನಿದ್ದೀರಿ. ಕೊಪ್ಪಳದ ಪರಿಸರ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಆ ಕಂಪನಿಗೆ ಅನುಕೂಲ ಮಾಡಿಕೊಟ್ಟರೂ ನೀವು ಕಣ್ಮುಚ್ಚಿ ಕುಳಿತಿದ್ದೀರಿ. ಸಾರ್ವಜನಿಕ ಆಲಿಕೆ ಸಭೆಗೆ ತಮ್ಮನ್ನು ಆಹ್ವಾನಿಸಲಿಲ್ಲ, ಆ ವಿಷಯ ತಮಗೆ ತಿಳಿದೇ ಇಲ್ಲ ಎಂದು ಶಾಸಕರು ಸಾರ್ವಜನಿಕವಾಗಿಯೇ ಹೇಳಿದರೂ ನೀವು ಸುಮ್ಮನಿದ್ದೀರಿ. ಹೀಗಾಗಿ ಈ ವಿಷಯದಲ್ಲಿ ಮಾತನಾಡುವ ನೈತಿಕ ಹಕ್ಕನ್ನು ನೀವು ಕಳೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ.
ನಿಮ್ಮ ನಿಷ್ಕ್ರಿಯತೆ ಗಮನಿಸಿ, ನಮ್ಮ ಪಕ್ಷ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜತೆ ಸಂಪರ್ಕ ಸಾಧಿಸಿ, ಉನ್ನತ ಮಟ್ಟದ ಸಮಿತಿ ರಚನೆ ಆಗುವಂತೆ ನೋಡಿಕೊಂಡಿತು. ಆ ಸಮಿತಿ ಕಾರ್ಖಾನೆಗಳಿಗೆ ಭೇಟಿ ನೀಡಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿತು. ಕನಿಷ್ಠ ಪಕ್ಷ ಆ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಗಮನಿಸಿ ಮತ್ತು ಆ ನಿರ್ದೇಶನಗಳನ್ನು ಪಾಲಿಸುವಂತೆ ಖಾಸಗಿ ಕಾರ್ಖಾನೆಗಳಿಗೆ ಆದೇಶ ನೀಡಿ. ಸಂಸದರಾಗಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ.