ಕನ್ನಡ ವಿಷಯದಲ್ಲಿ ಅನುತ್ತೀರ್ಣ: ಕಾರಣ ಹುಡುಕಲು ಸಮಿತಿ

KannadaprabhaNewsNetwork |  
Published : Jul 10, 2025, 12:48 AM IST

ಸಾರಾಂಶ

ಮಾತೃಭಾಷೆಯಲ್ಲಿ ವಿದ್ಯಾರ್ಥಿಗಳ ಹಿನ್ನಡೆಗೆ ಪಠ್ಯಪುಸ್ತಕ ಕಾರಣವೋ? ಮಕ್ಕಳ ಓದಿನಲ್ಲಿ ಲೋಪಗಳಾಗುತ್ತಿವೆಯೋ? ಶಿಕ್ಷಕರ ಸಮಸ್ಯೆ ಕಾರಣವೋ? ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜು. 23ಕ್ಕೆ ಪ್ರಾಧಿಕಾರದ ಸಾಮಾನ್ಯ ಸಭೆ ಇದೆ. ಅಲ್ಲಿ ಉಪಸಮಿತಿ ರಚಿಸಲಾಗುವುದು.

ಧಾರವಾಡ:

ಇತ್ತೀಚಿನ ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾತೃಭಾಷೆ ಕನ್ನಡ ವಿಷಯದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದು, ಇದಕ್ಕೆ ಕಾರಣ ಹುಡುಕಿ ಪರಿಹಾರ ಒದಗಿಸಲು ಸಮಿತಿಯೊಂದನ್ನು ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃಭಾಷೆಯಲ್ಲಿ ವಿದ್ಯಾರ್ಥಿಗಳ ಹಿನ್ನಡೆಗೆ ಪಠ್ಯಪುಸ್ತಕ ಕಾರಣವೋ? ಮಕ್ಕಳ ಓದಿನಲ್ಲಿ ಲೋಪಗಳಾಗುತ್ತಿವೆಯೋ? ಶಿಕ್ಷಕರ ಸಮಸ್ಯೆ ಕಾರಣವೋ? ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜು. 23ಕ್ಕೆ ಪ್ರಾಧಿಕಾರದ ಸಾಮಾನ್ಯ ಸಭೆ ಇದೆ. ಅಲ್ಲಿ ಉಪಸಮಿತಿ ರಚಿಸಲಾಗುವುದು. ಸಮಿತಿಯಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು ಇರಲಿದ್ದಾರೆ. ಮಾತೃಭಾಷೆಯಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿರುವುದು ಏಕೆ? ಎಂಬುದರ ಬಗ್ಗೆ ಸಮಿತಿಯು ಮಾಹಿತಿ ಕಲೆ ಹಾಕಲಿದೆ ಎಂದರು.

ತ್ರಿಭಾಷಾ ಸೂತ್ರಕ್ಕೆ ವಿರೋಧ: ದೇಶದಲ್ಲಿ ಹಿಂದಿ ಭಾಷೆಯಾಗಿ ಬರುತ್ತಿಲ್ಲ. ಅದು ಅಧಿಕಾರವಾಗಿ ಬರುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ 240 ಬೇರೆ ಬೇರೆ ಭಾಷಿಕರಿದ್ದಾರೆ. ಇಲ್ಲಿ ತ್ರಿಭಾಷಾ ಸೂತ್ರವನ್ನು ಪ್ರಾಧಿಕಾರ ವಿರೋಧಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದ್ವಿಭಾಷಾ ಸೂತ್ರಕ್ಕೆ ತಜ್ಞರು ಶಿಫಾರಸ್ಸು ಮಾಡಿರುವ ಮಾಹಿತಿ ಇದ್ದು, ಇದನ್ನು ಅಂಗೀಕರಿಸಲು ಒತ್ತಾಯಿಸುತ್ತೇವೆ. ದೇಶದ ಬೇರೆ ರಾಜ್ಯಗಳಲ್ಲಿ ಇರುವ 40 ಸಾವಿರ ಕನ್ನಡಿಗರಿಗಾಗಿ 8 ಲಕ್ಷ ವಿದ್ಯಾರ್ಥಿಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಇದು ಅವೈಜ್ಞಾನಿಕ. ಹಿಂದಿ ಕಲಿಕೆಯನ್ನು ಬೇಕಿದ್ದರೆ ವಿದ್ಯಾರ್ಥಿಗಳ ಆಯ್ಕೆಗೆ ಬಿಡಲಿ ಎಂದು ಬಿಳಿಮಲೆ ಸ್ಪಷ್ಟ ಅಭಿಪ್ರಾಯ ತಿಳಿಸಿದರು.

ನಾಲ್ಕು ಸಾವಿರ ಕನ್ನಡ ಶಾಲೆಗಳು ಆಂಗ್ಲ ಶಾಲೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಅಲ್ಲಿ ಕನ್ನಡ ಮಾಧ್ಯಮದ ಶಿಕ್ಷಕರೆ ಆಂಗ್ಲ ಮಾದ್ಯಮದ ಶಿಕ್ಷಕರಾಗುತ್ತಿದ್ದಾರೆ. ಮುಂದೆ ಕನ್ನಡ- ಆಂಗ್ಲ ಮಾಧ್ಯಮಗಳೆರಡೂ ಸಂದಿಗ್ಧತೆ ಎದುರಿಸಲಿವೆ. ಕನ್ನಡ ಪಠ್ಯಕ್ರಮ ಕಠಿಣ ಇದೆ. ಹೀಗಾಗಿ ವಿದ್ಯಾರ್ಥಿಗಳು ಕನ್ನಡ ಆಯ್ಕೆಗೆ ಹಿಂದೇಟು ಹಾಕುತ್ತಿದ್ದಾರೆ. ಪಠ್ಯಕ್ರಮ ಸರಳೀಕರಣಗೊಳಿಸಿದರೆ ಕನ್ನಡ ಭಾಷೆಗೆ ನಿಗದಿತ 125 ಅಂಕಗಳನ್ನು 100 ಅಂಕಗಳಿಗೆ ಇಳಿಸಿದರೂ ನಮ್ಮ ಅಭ್ಯಂತರವಿಲ್ಲ ಎಂದರು.

ವಿಮಾನ ನಿಲ್ದಾಣಗಳಿಗೆ ಸ್ಥಳೀಯರ ಹೆಸರು: ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ವಿಜಯಪುರ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಗೆ ಸ್ಥಳೀಯ ಮಹನಿಯರ ಹೆಸರು ಇಡಬೇಕು ಎಂಬ ಮನವಿಗಳು ಬಂದಿವೆ. ಇದು ನ್ಯಾಯಯುತವಾದ ಬೇಡಿಕೆ ಆಗಿದ್ದು, ಸ್ಥಳೀಯ ಹೆಸರುಗಳಿಗೆ ಮಾನ್ಯತೆ ಇದೆ. ಈ ಬಗ್ಗೆ ಆಯಾ ಜಿಲ್ಲಾಡಳಿತಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿರುವುದಾಗಿ ಬಿಳಿಮಲೆ ತಿಳಿಸಿದರು.

ವಿವಿಧ ಟ್ರಸ್ಟ್‌ಗಳ ಸ್ಥಿತಿ ಅಯೋಮಯ: ರಾಜ್ಯದಲ್ಲಿ ಮಹನೀಯರ ಹೆಸರಿನಲ್ಲಿರುವ ವಿವಿಧ ಟ್ರಸ್ಟ್‌ಗಳ ಸ್ಥಿತಿ ಅಯೋಮಯವಾಗಿದೆ. ಅನುದಾನ ಕೊರತೆ ಸಮಸ್ಯೆ ಆಗಿದೆ ಎಂಬ ದೂರುಗಳಿವೆ. ಹೀಗಾಗಿ ಟ್ರಸ್ಟ್‌ಗಳ ಸ್ಥಿತಿಗತಿ ಏನಿದೆ ಎಂಬುದರ ಬಗ್ಗೆ ಸವಿವರವಾದ ವರದಿ ಸಿದ್ಧಪಡಿಸಿ ಅವುಗಳ ಸಬಲೀಕರಣಕ್ಕೆ ಏನು ಮಾಡಬಹುದು ಎಂಬುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಳಿಮಲೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಸದಸ್ಯೆ ದಾಕ್ಷಾಯಿಣಿ ಹುಡೇದ, ಜಿಲ್ಲಾಧಿಕಾರಿ ದಿವ್ಯಪ್ರಭು, ಲಿಂಗರಾಜ ಅಂಗಡಿ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ