21ನೇ ಶತಮಾನದಲ್ಲೂ ಸಮಾನತೆ ಸಾಧಿಸುವಲ್ಲಿ ವಿಫಲ: ಡಾ. ತೋಂಟದ ಸಿದ್ಧರಾಮ ಶ್ರೀಗಳು

KannadaprabhaNewsNetwork |  
Published : Aug 21, 2026, 02:15 AM IST
ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು ಕೃತಿಯನ್ನು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಕೇರಳದಲ್ಲಿ ನಾರಾಯಣ ಗುರುಗಳು ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸಿದ ಮಹಾನ್ ಮಾನವತಾವಾದಿ. ಅವರ ಆದರ್ಶಗಳನ್ನು ಸಾರುವ ಈ ಕೃತಿಯನ್ನು ಪ್ರತಿಯೊಬ್ಬರೂ ಓದಿ ಅನುಸರಿಸಬೇಕು.

ಗದಗ: ಭಾರತವು ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಆದರೆ, ಈ ಆಧುನಿಕ ಯುಗದಲ್ಲೂ ದೇಶದಲ್ಲಿ ಅಸಮಾನತೆ ಹಾಗೂ ಮೌಢ್ಯಾಚರಣೆಗಳು ಬೇರೂರಿವೆ. 21ನೇ ಶತಮಾನದಲ್ಲೂ ಮಾನವರ ನಡುವೆ ಸಮಾನತೆ ಸಾಧಿಸುವಲ್ಲಿ ವಿಫಲರಾಗಿದ್ದೇವೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ವಿಷಾದಿಸಿದರು.

ನಗರದ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಜರುಗಿದ 2811ನೇ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ, ಪರಶುರಾಮ ಎಸ್. ಇಳಿಗೇರ ಅವರು ರಚಿಸಿದ ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಮಹಾವೀರ, ಬುದ್ಧ, ಬಸವೇಶ್ವರ ಸೇರಿದಂತೆ ಶರಣರು, ನಾರಾಯಣ ಗುರುಗಳು, ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ ಅವರಂಥ ಮಹನೀಯರು ಸಮಾನತೆ ತರಲು ಧಾರ್ಮಿಕ ಆಂದೋಲನಗಳನ್ನು ಮಾಡಿದ್ದಾರೆ. ಆದರೂ ಜಾತಿ, ಲಿಂಗ ಹಾಗೂ ವರ್ಣಗಳ ತಾರತಮ್ಯ ಉಳಿದಿರುವುದು ಖೇದಕರ ಎಂದರು.

ಕೇರಳದಲ್ಲಿ ನಾರಾಯಣ ಗುರುಗಳು ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸಿದ ಮಹಾನ್ ಮಾನವತಾವಾದಿ. ಅವರ ಆದರ್ಶಗಳನ್ನು ಸಾರುವ ಈ ಕೃತಿಯನ್ನು ಪ್ರತಿಯೊಬ್ಬರೂ ಓದಿ ಅನುಸರಿಸಬೇಕು ಎಂದರು.

ಶರಣರು ಕಂಡ ಅನಾದಿ ಬಸವಣ್ಣ ವಿಷಯ ಕುರಿತು ಪ್ರವಚನ ನೀಡಿದ ಗಿರಿಜಕ್ಕ ಧರ್ಮರೆಡ್ಡಿ, ಬಸವಣ್ಣನವರು ಕೇವಲ ಭಕ್ತಿ ಭಂಡಾರಿಯಷ್ಟೇ ಅಲ್ಲ, ವಿನಯದ ಭಂಡಾರಿಯೂ ಆಗಿದ್ದರು ಎಂದರು.

ನಗರಸಭೆಯ ಮಾಜಿ ಉಪಾಧ್ಯಕ್ಷ ಶಂಕರ ಹಾನಗಲ್ಲ ಮಾತನಾಡಿ, ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳು, ಶ್ರೀಮಠದಿಂದ ನಾರಾಯಣ ಗುರುಗಳ ಕುರಿತು ಪುರಾಣ ಕಾವ್ಯ ಬರೆಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು. ಲೇಖಕ ಪರಶುರಾಮ ಇಳಿಗೇರ ಕೃತಿ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಸೇವೆ ಸಲ್ಲಿಸಿದರು. ಜೀವನ ಯಲಬುರ್ಗಿ ಧರ್ಮಗ್ರಂಥ ಪಠಣ, ಮೇಘಾ ಮುದ್ದಿ ವಚನ ಚಿಂತನ ನಡೆಸಿಕೊಟ್ಟರು. ಕರವೀರಯ್ಯ ಕೋರಿಮಠ ಪರಿವಾರ ಹಾಗೂ ವಿನಾಯಕ ಮಾನ್ವಿ ದಾಸೋಹ ಸೇವೆ ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲ್ಲನಗೌಡರ ನಿರೂಪಿಸಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹ ಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕಮಠ, ಆದೇಶ ಅಂಗಡಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಎಲ್‌ಎನ್‌, ಎಲ್‌ಬಿಎ ಸೂಕ್ತವಾಗಿ ಜಾರಿ ಮಾಡಿ
ಗದುಗಿನ ಹರಿ ಜಾತ್ರೋತ್ಸವ ಮಹಾ ಅನ್ನಪ್ರಸಾದಕ್ಕೆ ಭಕ್ತಿಸೇವೆ